ಅಕಾಲಿಕ ನಿಧನರಾದ ನಾಲ್ವರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ನೆರವು: ಸಿಎಂ ಬಿಎಸ್ ಯಡಿಯೂರಪ್ಪ

ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ಐದು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತ್ತೀಚೆಗೆ ಅಕಾಲಿಕವಾಗಿ ನಿಧನರಾದ ನಾಲ್ವರು ಪತ್ರಕರ್ತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ ಐದು ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಪತ್ರಕರ್ತರ ನಿಯೋಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾಡಿದ ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದು, ಇತ್ತೀಚೆಗೆ ಮರಣ ಹೊಂದಿದ ಪತ್ರಕರ್ತರಾದ ಗಜಾನನ ಹೆಗಡೆ, ಬಿ ಆರ್ ರೋಹಿತ್, ರವಿರಾಜ ವಳಲಂಬೆ, ದಿಗಂಬರ ಗರುಡಾ ಅವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ ಪರಿಹಾರ ಘೋಷಿಸಿದರು.

ಶನಿವಾರ ತಮ್ಮನ್ನು ಭೇಟಿಯಾದ ಪತ್ರಕರ್ತರ ನಿಯೋಗದ ಮನವಿಯಂತೆ ತಲಾ 5 ಲಕ್ಷ ರೂ.ಪರಿಹಾರ ಧನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಕ್ತಿಭವನದಲ್ಲಿ ಹಿರಿಯ ಪತ್ರಕರ್ತರು ಮತ್ತು ರಾಜಕೀಯ ವರದಿಗಾರರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಇತ್ತೀಚೆಗೆ ನಿಧನರಾದ ರಾಜಕೀಯ ವರದಿಗಾರ ರವಿರಾಜ್ ವಳಲಂಬೆ, ಕ್ರೀಡಾ ಪತ್ರಕರ್ತ ದಿಗಂಬರ್ ಗರುಡಾ, ವರದಿಗಾರ ರೋಹೀತ್ ಬಿ.ಆರ್, ಟಿವಿ ನಿರೂಪಕರಾಗಿದ್ದ  ಗಜಾನನ ಹೆಗಡೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಯಿತು.

ಪತ್ರಕರ್ತರ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಮೃತರ ಕುಟುಂಬಗಳಿಗೆ ತಲಾ  5 ಲಕ್ಷ ರೂ ಪರಿಹಾರ ನೀಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಪರಿಹಾರದ ಮೊತ್ತ ಮೃತರ ಕುಟುಂಬ ಸದಸ್ಯರಿಗೆ ತಕ್ಷಣ ಸಿಗುವಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದರು.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಹೆಚ್ ವಿ ಕಿರಣ್, ಕಾರ್ಯದರ್ಶಿ ಆನಂದ ಬೈದನಮನೆ, ಟಿವಿ 9 ಸಂಪಾದಕ ರಂಗನಾಥ್ ಭಾರದ್ವಾಜ್, ರಾಜ್ ನ್ಯೂಸ್ ಸಂಪಾದಕ ಹಮೀದ್ ಪಾಳ್ಯ, ಹಿರಿಯ ಪತ್ರಕರ್ತರಾದ ಬಿ.ವಿ.ಶಿವಶಂಕರ್, ಗುರುಲಿಂಗಸ್ವಾಮಿ, ಶಿವರುದ್ರಪ್ಪ, ವಿಲಾಸ್ ನಾಂದೋಡ್ಕರ್,  ಹೆಚ್ ಪಿ.ಸಿದ್ದೇಶಕುಮಾರ್, ನಾಗರಾಜ್ ಕೆ.ಎಸ್., ಸುನೀಲ್ ಶಿರಸಂಗಿ, ಟಿವಿ ನಿರೂಪಕರಾದ ರಾಧಾ ಹಿರೇಗೌಡರ್, ಗೌರೀಶ್ ಅಕ್ಕಿ, ಶಂಕರ್ ಪಾಗೋಜಿ ಸೇರಿದಂತೆ ಹಲವರು ನಿಯೋಗದಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com