ನಾಡಿನೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ

ನಾಡಿನೆಲ್ಲೆಡೆ ಸೋಮವಾರ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು. ವಿವಿಧ ದೇವಸ್ಥಾಗಳಲ್ಲಿ ಪೂಜಾ ಕಾರ್ಯಕ್ರಮಗಳು ಭಕ್ತಿಪೂರ್ಕವಾಗಿ ನಡೆದವು. ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಡಿನೆಲ್ಲೆಡೆ ಸೋಮವಾರ ವೈಕುಂಠ ಏಕಾದಶಿ ಸಂಭ್ರಮ ಮನೆಮಾಡಿತ್ತು. ವಿವಿಧ ದೇವಸ್ಥಾಗಳಲ್ಲಿ ಪೂಜಾ ಕಾರ್ಯಕ್ರಮಗಳು ಭಕ್ತಿಪೂರ್ಕವಾಗಿ ನಡೆದವು. ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. 

ವೆಂಕಟೇಶ್ವರ ದೇವಸ್ಥಾನಗಳಲ್ಲಿ ವೈಕುಂಠ ದ್ವಾರಗಳ ಮೂಲಕ ಸಾಗಿ ಭಕ್ತಿ ಸಾಗರದಲ್ಲಿ ಮಿಂದೆದ್ದರು. ಬೆಂಗಳೂರು, ಮೈಸೂರು, ಮಂಡ್ಯ, ಬೆಳಗಾವಿ, ಗದಗ ಸೇರಿದಂತೆ ವಿವಿಧಡೆ ವೆಂಕಟೇಶ್ವರ ದೇವಾಲಯಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಬ್ರಾಹ್ಮಿ ಮುಹೂರ್ತದಲ್ಲಿ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು. ಉಚಿತವಾಗಿ ಭಕ್ತಾದಿಗಳಿಗೆ ಲಡ್ಡು ವಿತರಣೆ ಮಾಡಲಾಯಿತು. ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಇಸ್ಕಾನ್ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಮೂರು ಗಂಟೆ ವೇಳೆಗೆ ಶ್ರೀನಿವಾಸ ದೇವರಿಗೆ ಹಾಲು, ಮೊಸರು, ತುಪ್ಪ ಮತ್ತು ಹಣ್ಣಿ ಅಭಿಷೇಕ ನೆರವೇರಿಸಲಾಯಿತು. ಭಗವಂತನಿಗೆ ಬೆಳ್ಳಿ ಆಧರಿತ ಅಮೆರಿಕ ವಜ್ರದ ಆಭರಣಗಳಿಂದ ಅಲಂಕರಿಸಲಾಗಿತ್ತು. 

ಇದೇ ಸಂದರ್ಭದಲ್ಲಿ ಬೆಳಿಗ್ಗೆ ಮತ್ತು ಸಂಜೆ ಕೃಷ್ಣಾ, ರುಕ್ಮಿಣಿ ಮತ್ತು ಸತ್ಯಭಾಮರ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು. ಹರೇ ಕೃಷ್ಣ ಗಿರಿ ಇಡೀ ದಿನ ಭಕ್ತರ ಅಮಿತೋತ್ಸಾಹದಿಂದ ವಿಜೃಂಭಿಸಿತು. ಒಂದು ಲಕ್ಷ ಲಡ್ಡು, ಹತ್ತು ಟನ್ ಸಿಹಿ ಪೊಂಗಲ್ ಅನ್ನು ಭಕ್ತರಿಗೆ ವಿತರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ರಾಜಕಾರಣಿಗಳು, ಗಣ್ಯರು, ಧಾರ್ಮಿಕ ಮುಖಂಡರು ದರ್ಶನ ಪಡೆದರು. ಬೆಂಗಳೂರಿನ ವೈಯಾಲಿ ಕಾವಲ್ ನಲ್ಲಿರುವ ತಿರುಪತಿ, ತಿರುಮಲ ದೇವಸ್ಥಾನಂ ಟ್ರಸ್ಟ್ ನಲ್ಲಿರುವ ವೆಂಕಟೇಶ್ವರ ಸನ್ನಿಧಿಯಲ್ಲಿ ವಿಶೇಷ ಅಲಂಕಾರ ಕಣ್ಮನ ಸೆಳೆಯಿತು. ಥೇಟ್ ತಿರುಪತಿ ಮಾದರಿಯಲ್ಲಿಯೇ ವೆಂಕಟರಮಣ ಸ್ವಾಮಿಯನ್ನು ಅಲಂಕರಿಸಲಾಗಿತ್ತು. 
ಬೆಂಗಳೂರಿನ ಕೋಟೆ ವೆಂಕಟರಮಣ ಸ್ವಾಮಿ, ರಾಜಾಜಿನಗರದ ವೆಂಕಟರಮಣ ದೇವಸ್ಥಾನದಲ್ಲೂ ಭಕ್ತ ಸಾಗರವೇ ನೆರೆದಿತ್ತು. 

ಮಾಲೂರಿನ ಚಿಕ್ಕತಿರುಪತಿಯಲ್ಲಿ ಬೆಳಗಿನಿಂದ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ನೆರೆ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿ ವೆಂಕಟರಮಣ ಸ್ವಾಮಿಯ ದರ್ಶನ ಪಡೆದರು. ಗದಗ ಐತಿಹಾಸಿಕ ಪ್ರಸಿದ್ದ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು. ವೈಕುಂಠ ಏಕಾದಶಿ ಪ್ರಯುಕ್ತ ಸಹಸ್ರಾರು ಭಕ್ತಾದಿಗಳು ಶ್ರೀ ವೀರ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ,  ದರ್ಶನ ಪಡೆದರು. ಬೆಟಗೇರಿ ಪಟ್ಟಣದ ಶ್ರೀ ಬಾಲಾಜಿ ಮ೦ದಿರದಲ್ಲಿ ಶ್ರೀ ಬಾಲಾಜಿ ದೇವರಿಗೆ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಮತ್ತು ಅಲ೦ಕಾರ ಜರುಗಿದವು. 

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವರಹನಾಥಕಲ್ಲಹಳ್ಳಿಯಲ್ಲಿ ಭೂದೇವಿಸಮೇತನಾಗಿ ನೆಲೆಸಿರುವ ಭೂ ವರಹಾನಾಥಸ್ವಾಮಿಗೆ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು. ಸಾವಿರಾರು ಭಕ್ತಾಧಿಗಳು ವೈಕುಂಠ ದ್ವಾರದ ಮೂಲಕ ಭೂವರಹಾನಾಥಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 10ಸಾವಿರಕ್ಕೂ ಹೆಚ್ಚಿನ ಭಕ್ತಾದಿಗಳು ಸರತಿಯ ಸಾಲಿನಲ್ಲಿ ನಿಂತು ಭೂ ವರಹಾನಾಥಸ್ವಾಮಿಯ ದರ್ಶನ ಪಡೆದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೂ ಉಚಿತ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com