ಸಕಾಲಕ್ಕೆ ವ್ಹೀಲ್'ಚೇರ್ ನೀಡದ ಆಸ್ಪತ್ರೆ: ಅನಾರೋಗ್ಯ ಪೀಡಿತ ಮಗಳನ್ನು ಹೆಗಲ ಮೇಲೆ ಹೊತ್ತು ಓಡಿದ ತಂದೆ
ಬಳ್ಳಾರಿ: ಆಸ್ಪತ್ರೆಯಲ್ಲಿ ಸಕಾಲಕ್ಕೆ ವ್ಹೀಲ್ ಚೇರ್ ದೊರಕದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಅನಾರೋಗ್ಯ ಪೀಡಿತ ಮಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಓಡಿದ ಮನಕಲಕುವ ಘಟನೆ ವಿಜಯನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್)ನಲ್ಲಿ ಬುಧವಾರ ನಡೆದಿದೆ.
ಆರೋಗ್ಯ ಸಚಿವ ಶ್ರೀರಾಮುಲು ಅವರ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಿರ್ಗುಪ್ಪ ತಾಲೂಕಿನ ಶಾನ್ಪುರ ಗ್ರಾಮದ ನಿವಾಸಿಯಾಗಿರುವ ಮಬುಶಾ ಅವರು ತಮ್ಮ ಮಗಳು ಸಿಂತ್ರಿಜಾಳನ್ನು ಹೆಗಲ ಮೇಲೆ ಹೊತ್ತುಕೊಂಡು ಮತ್ತೊಂದು ವಾರ್ಡಿಗೆ ಕರೆದುಕೊಂಡು ಹೋಗಿದ್ದಾರೆ.
ಸಿರಿಗೆರೆ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸಿಂತ್ರಿಜಾ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಶಾಲಾ ಆಡಳಿತ ಮಂಡಳಿಯವರು ಸಿಂತ್ರಿಜಾ ತಂದೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಗಳನ್ನು ಮಬುಶಾ ಅವರು ಮಗಳನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ವ್ಹೀಲ್ ಚೇರ್ ಕೊಡುವ ಕುರಿತು ನನಗೆ ತಪ್ಪು ಮಾಹಿತಿಗಳನ್ನು ನೀಡಿ, ಕಾಲಹರಣ ಮಾಡುತ್ತಿದ್ದರು. ಹೀಗಾಗಿ ಹೆಗಲ ಮೇಲೆ ಹೊತ್ತುಕೊಂಡು ಮಗಳನ್ನು ಕರೆದೊಯ್ದೆ ಎಂದು ಮಬುಶಾ ಅವರು ಹೇಳಿದ್ದಾರೆ.
ಇದೀಗ ವ್ಹೀಲ್ ಚೇರ್ ಒದಗಿಸದ ವಿಮ್ಸ್ ಆಸ್ಪತ್ರೆಯ ಸಿಬ್ಬಂದಿಯ ಅಮಾನವೀಯ, ಅನಾಗರಿಕ ವರ್ತನೆಗೆ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ. ಸ್ವತಃ ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಇಂತಹ ಘಟನೆ ನಡೆದಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ. ವಿಮ್ಸ್ ಸಿಬ್ಬಂದಿಯ ನಡೆಗೆ ಸಾರ್ವಜನಿಕರು ತೀವ್ರವಾಗಿ ಖಂಡನೆ ವ್ಯಕ್ತಪಡಿಸುತ್ತಿದ್ದು, ಛೀಮಾರಿ ಹಾಕಿದ್ದಾರೆ. ತಪ್ಪುಸೆಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ