
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಜಿಲ್ಲಾ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡ ಕ್ರಮಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿ ರಚಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಈ ಕುರಿತು ಆದೇಶ ಹೊರಡಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್ ಅವರನ್ನು ಕೊರೊನಾ ಕೇರ್ ಸೆಂಟರ್, ಕೊವಿಡ್ ಹೆಲ್ತ್ ಕೇರ್ ಸೆಂಟರ್, ಕೊವಿಡ್ ಹಾಸ್ಪಿಟಲ್ ಗಳಿಗೆ ಮಾನವ ಸಂಪನ್ಮೂಲ ವಹಿಸಿಕೊಂಡಿರುವ ಜವಾಬ್ದಾರಿ ವಹಿಸಲಾಗಿದೆ. ಅವರೊಂದಿಗೆ ಐವರು ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಐ ಎಲ್ ಐ ಮತ್ತು ಸರಿ ಪ್ರಕರಣಗಳ ದಾಖಲಾತಿ ಮತ್ತು ಚಿಕಿತ್ಸೆ ಪಡೆದಿರುವ ಬಗ್ಗೆ ಮೇಲುಸ್ತುವಾರಿ ನೋಡಿಕೊಳ್ಳಲು ಎಟಿಐ ಡಿಜಿ ವಿ.ಮಂಜುಳಾ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಯೋಜನೆ ಮತ್ತು ಸಾಂಖಿಕ ಇಲಾಖೆ ಎಸಿಎಸ್ ಶಾಲಿನಿ ರಜನೀಶ್ ಅವರಿಗೆ ಸೋಂಕಿತರ ಮಾದರಿ ಸಂಗ್ರಹ, ತಪಾಸಣೆ ಮತ್ತು ಪ್ರಯೋಗಾಲಯಗಳಲ್ಲಿ ಬಳಕೆ ಮೇಲುಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್.ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್ ಅವರಿಗೆ ಸಮುದಾಯ ಪಾಲ್ಗೊಳ್ಳುವಿಕೆ, ನಗರದ ವಾರ್ಡ್ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಿರ್ವಹಣೆಯ ಮೇಲುಸ್ತುವಾರಿ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ಅವರು ಬೆಂಗಳೂರಲ್ಲಿ 8,500 ಬೂತ್ ಗಳಿವೆ. ಪ್ರತಿ ಬೂತ್ ಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡಲು ಚಿಂತನೆ ನಡೆಸಿದ್ದೇವೆ. ಹಳ್ಳಿಯಿಂದ ನಗರದ ಬೂತ್ ಮಟ್ಟದವರೆಗೂ ಟಾಸ್ಕ್ ಫೋರ್ಸ್ ಕಮಿಟಿ ಮಾಡುತ್ತೇವೆ. ಪ್ರತಿ ಮನೆಗೆ ಹೋಗಿ ಮನೆಯಲ್ಲಿ ಐಸೋಲೆಶನ್ ಮಾಡುವುದಾದ್ರೆ ಹೇಗೆ ? ಅಂತಹ ಲಕ್ಷಣಗಳಿವೆಯಾ ಎನ್ನುವುದರ ಬಗ್ಗೆ ಕಮಿಟಿ ಮರುಶೀಲನೆ ಮಾಡಿ ಸಲಹೆ ಸೂಚನೆ ನೀಡಲಿದೆ ಎಂದು ಸ್ಪಷ್ಟಪಡಿಸಿದರು.
Advertisement