ವೇತನದಲ್ಲಿ ತಾರತಮ್ಯ: ರಾಜೀನಾಮೆ ನೀಡಿದ 1,800 ಆಯುಷ್ ವೈದ್ಯರು; 4 ದಿನ ಕಾಲಾವಕಾಶ ಕೇಳಿದ ಸರ್ಕಾರ

ಸರ್ಕಾರಿ ಗುತ್ತಿಗೆ ವೈದ್ಯರ ಮುಷ್ಕರ, ಆಶಾ ಕಾರ್ಯಕರ್ತೆಯರ ಮುಷ್ಕರದ ನಡುವೆಯೇ ಕೊರೋನಾ ಸಂಕಷ್ಟದ ನಡುವಲ್ಲಿ ಸರ್ಕಾರಕ್ಕೆ 3ನೇ ಸವಾಲು ಎದುರಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ಗುತ್ತಿಗೆ ವೈದ್ಯರ ಮುಷ್ಕರ, ಆಶಾ ಕಾರ್ಯಕರ್ತೆಯರ ಮುಷ್ಕರದ ನಡುವೆಯೇ ಕೊರೋನಾ ಸಂಕಷ್ಟದ ನಡುವಲ್ಲಿ ಸರ್ಕಾರಕ್ಕೆ 3ನೇ ಸವಾಲು ಎದುರಾಗಿದೆ. ವೇತನ ತಾರತಮ್ಯ ಬಗೆಹರಿಸುವಂತೆ ಹಾಗೂ ಖಾಸಗಿ ಆಯುಷ್ ವೈದ್ಯರಿಗೂ ತುರ್ತು ಪರಿಸ್ಥಿತಿಯಲ್ಲಿ ಅಲೋಪತಿ ಔಷಧ ನೀಡಲು ಅವಕಾಶ ನೀಡುವಂತೆ ಒತ್ತಾಯಿಸಿ ರಾಜ್ಯದ 1,800 ಮಂದಿ ಸರ್ಕಾರಿ ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. 

ರಾಜ್ಯದಾದ್ಯಂತ ಇರುವ 20 ಸಾವಿರಕ್ಕೂ ಹೆಚ್ಚು ಖಾಸಗಿ ಆಯುಷ್ ಕ್ಲಿನಿಕ್ ಗಲನ್ನು ಮುಚ್ಚಿರುವ ಆಯುಷ್ ವೈದ್ಯರು, ಅನಿರ್ದಿಷ್ಟಾವಧಿ ಸೇವಾ ಬಹಿಷ್ಕಾರ ಮುಂದುವರೆಸಿದ್ದಾರೆ. 

ಇದರಿಂದಾಗಿ ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸೇವೆಯಿಂದ ಬಹುತೇಕ ಆಯುಷ್ ವೈದ್ಯರು ಹಿಂದೆ ಸರಿದಿದ್ದು, ವೈದ್ಯ ಸಿಬ್ಬಂದಿ ಕೊರತೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಬುಧವಾರ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ಎಲ್ಲಾ ವೈದ್ಯರ ರಾಜೀನಾಮೆ ಪತ್ರ ನೀಡಿದ್ದೇವೆ. ಅವರು ರಾಜೀನಾಮೆ ಅಂಗೀಕರಿಸಲು ಒಪ್ಪಿಲ್ಲ. ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಅಲ್ಲಿಯವರೆಗೂ ನಮ್ಮ ಸೇವೆ ಬಹಿಷ್ಕರಿಸಿದ್ದೇವೆಂದು ಭಾರತೀಯ ಆಯುಷ್ ವೈದ್ಯರ ಒಕ್ಕೂಟ ತಿಳಿಸಿದೆ.

ಮಂಜೂರಾಗಿರುವ ಎಂಬಿಬಿಎಸ್ ಹುದ್ದೆಗಳಲ್ಲಿ ಆಯುಷ್ ವೈದ್ಯರು, ರಾಷ್ಟ್ರೀಯಬಾಲ್ ಸ್ವಾಸ್ಥ್ಯ ಕಾರ್ಯಕ್ರಮ ವೈದ್ಯರು, ರಾಷ್ಟ್ರೀಯ ಆರೋಗ್ಯ ಆಯೋಗದ ಅಡಿಯಲ್ಲಿ ಆಯುಷ್ ವೈದ್ಯರು ಗುತ್ತಿಗೆ ಆಧಾರದ ಮೇಲೆ ವಿಮೆ ಮತ್ತು ಪಿಎಫ್ ಇಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆಯುಷ್ ವೈದ್ಯರಿಗೆ ರೂ.19,404, ಬಲ್ ಸ್ವಾಸ್ಥ್ಯ ವೈದ್ಯರಿಗೆ ರೂ.25,000, ಎಂಬಿಬಿಎಸ್ ಮಾಡಿರುವವರಿಗೆ ರೂ.26,000 ವೇತನ ನೀಡಲಾಗುತ್ತಿದೆ. ಆದರೆ, ಆಲೋಪತಿ ವೈದ್ಯರಿಗೆ ರೂ.52,000 ವೇತನ ನೀಡಲಾಗುತ್ತಿದೆ. 

ನಮಗೂ ಸಮಾನ ವೇತನ ಬೇಕು. ಕೊರೋನಾದಿಂದ ಸತ್ತರೆ ನಮಗೂ ರೂ.50 ಲಕ್ಷ ಪರಿಹಾರ ನೀಡಬೇಕು. ಈಗಾಗಲೇ ಸಾಕಷ್ಟು ಆಯುಷ್ ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವೈದ್ಯ ಮಧುಕರ್ ಅವರು ಹೇಳಿದ್ದಾರೆ. 

ಆಯುಷ್ ಫೆಡರೇಶನ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಡಾ.ಮಹವೀರ್ ಮಾತನಾಡಿ, ಖಾಸಗಿ ಆಯುಷ್ ವೈದ್ಯರಿಗೆ ಸಮಗ್ರ ತರಬೇತಿ ನೀಡಬೇಕು. ಸರ್ಕಾರಿ ಆಯುಷ್ ವೈದ್ಯರಿಗೆ ಅಲೋಪತಿ ಔಷಧಿಗಳ ಶಿಫಾರಸು ಮಾಡಲು ನಿಯಮ ರೂಪಿಸಲಾಯಿತು. ಆದರೆ ಅದನ್ನು ಖಾಸಗಿ ವೈದ್ಯರಿಗೆ ವಿಸ್ತರಿಸಲಾಗಿಲ್ಲ. ಸರ್ಕಾರವು ನಮ್ಮ ಸೇವೆಗಳನ್ನು ಕೋವಿಡ್ -19 ನಿರ್ವಹಣೆಗೆ ಉಚಿತವಾಗಿ ಬಳಸುತ್ತಿದೆ, ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com