ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆ ಕೊರೋನಾ ವೈರಸ್ ಕರಿನೆರಳು ಬಿದ್ದಿದ್ದು, ಈ ವರ್ಷ ಸಾಮೂಹಿಕ ವಿವಾಹ ನಡೆಸುವುದು ಸಂಶಯವೆಂದೇ ಹೇಳಲಾಗುತ್ತಿದೆ.
ಯೋಜನೆಯಡಿ ಬಡ ವಧುವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ಕಲ್ಪಿಸಿಕೊಡಲಾಗಿತ್ತು. ಒಮ್ಮೆಲೆ 1,000 ಜೋಡಿಗಳಿಗೆ ವಿವಾಹ ನಡೆಸಲು ಹಾಗೂ 8 ಗ್ರಾಂ ಮಂಗಳಸೂತ್ರದೊಂದೆ ವಧು ಹಾಗೂ ವರನಿಗೆ ರೂ.55,000, ರೇಷ್ಮೆ ಬಟ್ಟೆಗಳನ್ನು ನೀಡಲು ಸರ್ಕಾರ ನಿರ್ಧರಿಸಿತ್ತು.
ಮುಂಜರಾಯಿ ಇಲಾಖೆಯ 100 ದೇಗುಲಗಳಲ್ಲಿ ಈ ವಿವಾಹಗಳನ್ನು ನಡೆಸಬೇಕಿತ್ತು. ಏಪ್ರಿಲ್26 ಮತ್ತು ಮೇ.24 ರಂದು ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿತ್ತಲ್ಲದೇ, ಜಾಹೀರಾತುಗಳನ್ನೂ ನೀಡಿತ್ತು, ಆದರೆ, ಸಾಂಕ್ರಾಮಿಕ ರೋಗ, ಲಾಕ್ಡೌನ್ ಪರಿಣಾಮ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಬಳಿಕ ಸರ್ಕಾರ ಮತ್ತೆ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಡೆಸುವುದಾಗಿ ತಿಳಿಸಿತ್ತು. ಈ ಹಿಂದಿನ ಪರಿಸ್ಥಿತಿಗಿಂತಲೂ ರಾಜ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಈ ವರ್ಷ ಸಾಮೂಹಿಕ ವಿವಾಹ ನಡೆಯಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಜರಾತಿ ಇಲಾಖೆಯ ಆಯುಕ್ತ ರೋಹಿಣಿ ಸಿಂಧೂರಿಯವರು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಸಮಯದಲ್ಲೂ ನಡೆಯಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಈ ವರ್ಷ ಸಾಮೂಹಿಕ ವಿವಾಹ ನಡೆಯುವುದು ಸಂಶಯವಾಗಿದೆ ಎಂದು ಹೇಳಿದ್ದಾರೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ನೂರಾರು ಜನರು ತಮ್ಮ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ ಪರಿಸ್ಥಿತಿ ಬಗ್ಗೆ ನೋಂದಾವಣಿ ಮಾಡಿಕೊಂಡ ಜನರೊಂದಿಗೆ ಮಾತುಕತೆ ನಡೆಸಿದ್ದೇವೆಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಶ್ರಾವಣ ಮಾಸ ಹತ್ತಿರಬರುತ್ತಿದ್ದು, ಈ ಸಂದರ್ಭದಲ್ಲಿ ಹೆಚ್ಚೆಚ್ಚು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ಬಹಳ ಹತ್ತಿರದಿಂದ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಜಾತ್ರೆಗಳು ನಡೆಯುವುದು ಸಮಸ್ಯೆಯಲ್ಲ. ಆದರೆ, ಹೆಚ್ಚು ಜನರು ಸೇರುವುದೇ ಸಮಸ್ಯೆಯಾಗಿದೆ. ಈಗಾಗಲೇ ಗೃಹ ಸಚಿವಾಲಯ ಮಾರ್ಗಸೂಚಿಯನ್ವಯ ಜಾತ್ರೆಗಳಿಗೆ ನಿಷೇಧ ಹೇರಲಾಗಿದೆ. ಯಾವುದೇ ಸ್ಥಳದಲ್ಲಿಯೇ ಆದರೂ ಜನರು ಹೆಚ್ಚು ಸಂಖ್ಯೆಯಲ್ಲಿ ಸೇರುವಂತಿಲ್ಲ. ಪ್ರಸಕ್ತ ಸಾಲಿನಲ್ಲಿ ಯಾವುದೇ ಜಾತ್ರೆಗಳೂ, ರಥ ಎಳೆಯುವ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಹಬ್ಬಗಳು ಹಾಗೂ ಜಾತ್ರೆಗಳು ನಮ್ಮ ಸಂಪ್ರದಾಯದ ಒಂದು ಭಾಗವಾಗಿದೆ. ಆದರೆ, ಪರಿಸ್ಥಿತಿ ಹದಗೆಟ್ಟಿರುವುದರಿಂದ ಅವುಗಳಿಗೆ ಅವಕಾಶ ನೀಡಲಾಗುತ್ತಿಲ್ಲ. ಗ್ರಾಮೀಣ ಭಾಗದ ಜನರು ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಜಾತ್ರೆಗಳನ್ನು ನಡೆಸುವುದಿಲ್ಲ ಎಂಬ ಭರವಸೆ ನಮಗಿದೆ ಎಂದಿದ್ದಾರೆ.
Advertisement