ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಆಸ್ಪತ್ರೆಗಳಲ್ಲಿ ನರ್ಸ್, ಸಿಬ್ಬಂದಿ ಕೊರತೆ: ಸೇವೆ ವ್ಯತ್ಯಯ

ಎರಡು ದಿನಗಳ ಹಿಂದೆ ಕೋವಿಡ್-19ನಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 27 ವರ್ಷದ ಯುವಕ ಆಸ್ಪತ್ರೆಯಲ್ಲಿ ಪಟ್ಟ ಕಷ್ಟವನ್ನು ಹಂಚಿಕೊಂಡರು.
ಪಿಪಿಇ ಕಿಟ್ ಧರಿಸಿ ಪರೀಕ್ಷೆ ಮಾಡುತ್ತಿರುವ ಸಿಬ್ಬಂದಿ
ಪಿಪಿಇ ಕಿಟ್ ಧರಿಸಿ ಪರೀಕ್ಷೆ ಮಾಡುತ್ತಿರುವ ಸಿಬ್ಬಂದಿ

ಬೆಂಗಳೂರು: ಎರಡು ದಿನಗಳ ಹಿಂದೆ ಕೋವಿಡ್-19ನಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 27 ವರ್ಷದ ಯುವಕ ಆಸ್ಪತ್ರೆಯಲ್ಲಿ ಪಟ್ಟ ಕಷ್ಟವನ್ನು ಹಂಚಿಕೊಂಡರು.

ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಮಹಿಳೆಯರು ಮತ್ತು ಪುರುಷರಿಗೆ 24 ಬೆಡ್ ಗಳಿದ್ದವು. ಪ್ರತಿ ವಾರ್ಡ್ ನಲ್ಲಿ ಒಬ್ಬ ನರ್ಸ್ ಇದ್ದರು. ಅವರು 6 ಗಂಟೆಗಳ ಅವಧಿಯ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದರು. ನಮಗೆ ಏನಾದರೂ ಆರೋಗ್ಯ ಸಮಸ್ಯೆಯಾಗಿ ಹೆಲ್ತ್ ಚೆಕ್ ಮಾಡಲು ಹೇಳಿದರೆ ಕಾಯಿರಿ ಎಂದು ನರ್ಸ್ ಗಳು ಹೇಳುತ್ತಿದ್ದರು. ಹಲವು ರೋಗಿಗಳನ್ನು ನೋಡಿ ಕೆಲಸದ ಹೊರೆಯಿಂದ ನರ್ಸ್ ಗಳು ಸುಸ್ತಾದಂತೆ ಕಂಡುಬರುತ್ತಿದ್ದರು ಎಂದು ಹೆಸರು ಹೇಳಲಿಚ್ಛಿಸದ ಈ ಯುವಕ ಹೇಳುತ್ತಾರೆ.

ಅವರ ಮಾವ ಕೂಡ ಕೋವಿಡ್ ಚಿಕಿತ್ಸೆಗೆ ದಾಖಲಾಗಿದ್ದರು. ರಕ್ತದೊತ್ತಡವನ್ನು ನಿಯಂತ್ರಿಸಲು ಅವರಿಗೆ ಮಾತ್ರೆ ಬೇಕಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮಾತ್ರೆಗಳು ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು, ನರ್ಸ್ ಗಳ ಕೊರತೆಯಿಂದ ಕೋವಿಡ್ ಚಿಕಿತ್ಸೆ ಮೇಲೆ ಪರಿಣಾಮ ಬೀರುತ್ತಿದೆ.

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು, ನಮ್ಮಲ್ಲಿ 90 ವೆಂಟಿಲೇಟರ್ ಗಳಿದ್ದು ಪ್ರತಿ ನರ್ಸ್ ಗಳು 6ರಿಂದ 8 ವೆಂಟಿಲೇಟರ್ ಗಳನ್ನು 6 ಗಂಟೆಗಳ ಅವಧಿಯ ಶಿಫ್ಟ್ ಕೆಲಸದಲ್ಲಿ ನಿರ್ವಹಿಸಬಹುದು. ಅದರರ್ಥ ಪ್ರತಿ ಶಿಫ್ಟ್ ಗೆ 15 ನರ್ಸ್ ಗಳು ಬೇಕಾಗಿದ್ದು ಒಟ್ಟಾರೆ 45 ಮಂದಿ ಬೇಕು. ಆದರೆ ನಮ್ಮಲ್ಲಿರುವುದು ಕೇವಲ 30 ಮಂದಿ ದಾದಿಯರು. ಅವರು ಹೇಗೆ ಎಲ್ಲಾ ಐಸಿಯು ರೋಗಿಗಳನ್ನು ನೋಡಿಕೊಳ್ಳುವುದು? ಹೀಗಾದಾಗ ಆರೋಗ್ಯ ಸೇವೆ ನೀಡುವಲ್ಲಿ ವ್ಯತ್ಯಯವಾಗುತ್ತದೆ ಎನ್ನುತ್ತಾರೆ.

ಇಬ್ಬರು ರೋಗಿಗಳ ಆರೋಗ್ಯ ಸ್ಥಿತಿ ಒಂದೇ ಸಮಯಕ್ಕೆ ಇಳಿಮುಖವಾದರೆ ಸಿಬ್ಬಂದಿ ಯಾರನ್ನು ಮೊದಲು ನೋಡುವುದು, ಒಂದೇ ಸಮಯಕ್ಕೆ ಇಬ್ಬರ ಮೇಲೆ ಕಾಳಜಿ ವಹಿಸಲು ಸಾಧ್ಯವಿಲ್ಲ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರನ್ನು ಬೇಗನೆ ನೇಮಕ ಮಾಡಿಕೊಳ್ಳದಿದ್ದರೆ ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಸಮಸ್ಯೆಯುಂಟಾಗಬಹುದು ಎನ್ನುತ್ತಾರೆ.

ಮಲ್ಲೇಶ್ವರದ ಕೆ ಸಿ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರು, ನಮ್ಮ ಆಸ್ಪತ್ರೆಯ 360 ಬೆಡ್ ಗಳು ಭರ್ತಿಯಾಗಿವೆ. 100 ಕೋವಿಡ್ ಮತ್ತು 260 ಬೇರೆ ರೋಗಿಗಳಿಗೆ ತುಂಬಿ ಹೋಗಿವೆ. ಆದರೆ ನಮ್ಮಲ್ಲಿ ಅರ್ಧದಷ್ಟು ಮಾತ್ರ ಸಿಬ್ಬಂದಿಯಿದ್ದಾರೆ. ನಮ್ಮ ಸಿಬ್ಬಂದಿಯಲ್ಲಿ 10 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ಮತ್ತು ಉಳಿದ 30 ಮಂದಿ ಕ್ವಾರಂಟೈನ್ ಆಗಿದ್ದಾರೆ. ಈ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ ಪ್ರಸನ್ನ ಹೆಚ್ ಎಂ, ಶೇಕಡಾ 50ರಷ್ಟು ಬೆಡ್ ಗಳನ್ನು ಕೋವಿಡ್-19 ರೋಗಿಗಳಿಗೆ ಕೊಡಿ ಎಂದು ಸರ್ಕಾರ ಕೇಳುತ್ತಿದೆ. ಆದರೆ ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ. ಸಿಬ್ಬಂದಿ ಪಿಪಿಇ ಕಿಟ್ ಗಳನ್ನು ಬದಲಿಸಬೇಕಿರುವುದರಿಂದ 6 ಗಂಟೆ ಅವಧಿಯ ಶಿಫ್ಟ್ ನಲ್ಲಿ 4 ಸಿಬ್ಬಂದಿಯಾದರೂ ಬೇಕು. ಹೀಗಾಗಿ ಕೋವಿಡ್-19 ರೋಗಿಗಳನ್ನು ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಅವಶ್ಯಕತೆಯಿದೆ ಎನ್ನುತ್ತಾರೆ.

ಇದೇ ರೀತಿ ಇನ್ನು ಕೆಲ ತಿಂಗಳು ಕೊರೋನಾ ಮುಂದುವರಿದರೆ ನಮ್ಮಲ್ಲಿ ನುರಿತ ಸಿಬ್ಬಂದಿ ಕೂಡ ಸಿಗುವುದಿಲ್ಲ. ಈಗಾಗಲೇ ಹಲವು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದೆ, ನಾವು ಏಳು ಬೆಡ್ ಗೆ ಒಬ್ಬ ನರ್ಸ್ ನ್ನು ನೇಮಕ ಮಾಡುತ್ತೇವೆ, ಆದರೆ ಸರ್ಕಾರ 10 ಬೆಡ್ ಗಳಿಗೆ ಒಬ್ಬರನ್ನು ಕೊಡಿ ಎಂದು ಕೇಳುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕಷ್ಟವಾಗುತ್ತದೆ ಎನ್ನುತ್ತಾರೆ ಎಂ ಎಸ್ ರಾಮಯ್ಯ ಆಸ್ಪತ್ರೆಯ ಅಧ್ಯಕ್ಷ ಡಾ ನರೇಶ್ ಶೆಟ್ಟಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com