ಕೋವಿಡ್ ಕೇರ್ ಕೇಂದ್ರಗಳಲ್ಲಿ ವೆಂಟಿಲೇಷನ್'ಗಳು ಉತ್ತಮವಾಗಿರಬೇಕು: ಸರ್ಕಾರಕ್ಕೆ ವೈದ್ಯರ ಸಲಹೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಕೇಂದ್ರಗಳ ಸಂಖ್ಯೆಯನ್ನು ರಾಜ್ಯ ಸರ್ಕಾರ ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಉತ್ತಮವಾಗ ವೆಂಟಿಲೇಷನ್ ಗಳಿರಬೇಕೆಂದು ವೈದ್ಯರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೋವಿಡ್ ಕೇಂದ್ರಗಳಲ್ಲಿ ಉತ್ತಮವಾದ ವೆಂಟಿಲೇಷನ್ ಇರಬೇಕು. ಪ್ರಮುಖವಾಗಿ ನೈಸರ್ಗಿಕ ಗಾಳಿ ಉತ್ತಮವಾಗಿರಬೇಕು. ಇದರಿಂದ ಸೋಂಕಿತ ವ್ಯಕ್ತಿ ಬಹುಬೇಗ ಗುಣಮುಖನಾಗಲು ಸಹಾಯವಾಗುತ್ತದೆ. ಗಾಳಿ ಕಡಿಮೆಯಿರುವ ಸ್ಥಳದಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೂ ಕೂಡ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
ವ್ಯಕ್ತಿಯಿಂದ ವ್ಯಕ್ತಿಗೆ ಅಷ್ಟೇ ಅಲ್ಲದೆ, ವೈರಸ್ ಗಾಳಿಯಿಂದಲೂ ಹರಡುವ ಸಾಧ್ಯತೆಗಳಿವೆ. ವಿಶ್ವ ಆರೋಗ್ಯ ಸಂಸ್ಥೆಗಿಂತಲೂ ಐಸಿಎಂಆರ್ ಬಳಿ ಉತ್ತಮ ಮಾಹಿತಿಗಳಿವೆ ಮತ್ತು ಚಿಕಿತ್ಸೆಯ ವಿಧಾನಗಳನ್ನು ನಿರ್ವಹಿಸಲು ಉತ್ತಮ ಸ್ಥಾನದಲ್ಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಮೈದಾನಗಳಲ್ಲಿ ನಿರ್ಮಾಣವಾಗಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ ಗಾಳಿ ಉತ್ತಮವಾಗಿರಬೇಕು. ಪ್ರತೀ ಕೋವಿಡ್ ವಾರ್ಡ್ ಅಥವಾ ಪ್ರದೇಶಗಳು ಪ್ರತ್ಯೇಕವಾಗಿರಬೇಕು. ಇದರಿಂದ ಗಾಳಿ ಉತ್ತಮವಾಗಿ ಓಡಾಡಲು ಸಾಧ್ಯವಾಗುತ್ತದೆ. ದೊಡ್ಡ ದೊಡ್ಡ ಮೈದಾನಗಳಲ್ಲಿ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಉತ್ತಮ ಸ್ಥಳವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಸತ್ಯನಾರಾಯಣ ಮೈಸೂರು ಅವರು ತಿಳಿಸಿದ್ದಾರೆ.