ಕೆಸಿ ಜನರಲ್ ಆಸ್ಪತ್ರೆಯನ್ನು ಕೊರೋನಾ ಪೀಡಿತರಿಗಷ್ಟೇ ಸೀಮಿತಗೊಳಿಸಿ: ಸರ್ಕಾರಕ್ಕೆ ಸಿಬ್ಬಂದಿಗಳ ಮನವಿ

ವೈದ್ಯರ ಮೇಲೆ ಹಲ್ಲೆ ನಡೆದ ಘಟನೆ ಬಳಿಕ ಆತಂಕಕ್ಕೊಳಗಾಗಿರುವ ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿಗಳು, ಆಸ್ಪತ್ರೆಯನ್ನು ಕೊರೋನಾ ಪೀಡಿತರಿಗಷ್ಟೇ ಸೀಮಿತಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವೈದ್ಯರ ಮೇಲೆ ಹಲ್ಲೆ ನಡೆದ ಘಟನೆ ಬಳಿಕ ಆತಂಕಕ್ಕೊಳಗಾಗಿರುವ ಕೆಸಿ ಜನರಲ್ ಆಸ್ಪತ್ರೆಯ ಸಿಬ್ಬಂದಿಗಳು, ಆಸ್ಪತ್ರೆಯನ್ನು ಕೊರೋನಾ ಪೀಡಿತರಿಗಷ್ಟೇ ಸೀಮಿತಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಕೊರೋನಾ ಜೊತೆಗೆ, ಕೊರೋನಾ ಇಲ್ಲದ ರೋಗಿಗಳಿಗೂ ಚಿಕಿತ್ಸೆ ನೀಡುವುದು ಸಿಬ್ಬಂದಿಗಳಿಗೆ ಸಾಕಷ್ಟು ಹೊರೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಕೊರೋನಾ ಪೀಡಿತರು ಹಾಗೂ ಕೊರೋನಾ ಪೀಡಿತರಲ್ಲದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ್ ನಾರಾಯಣ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಆಸ್ಪತ್ರೆ ಸಿಬ್ಬಂದಿಗಳ ಈ ಮನವಿಯನ್ನು ತಿರಸ್ಕರಿಸಿರುವ ಉಪ ಮುಖ್ಯಮಂತ್ರಿಗಳು ಕೊರೋನಾ ಪೀಡಿತ ಹಾಗೂ ಕೊರೋನಾ ಪೀಡಿತರಲ್ಲದ ಸೋಂಕಿತರಿಬ್ಬರಿಗೂ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆನ್ನಲಾಗುತ್ತಿದೆ. 

ಆಸ್ಪತ್ರೆಯಲ್ಲಿ ಒಟ್ಟು 360 ಹಾಸಿಗೆಗಳಿದ್ದು, 100 ಹಾಸಿಗೆಗಳನ್ನು ಕೊರೋನಾ ಪೀಡಿತರಿಗೆ ಮೀಸಲಿಡಲಾಗಿದೆ. ಉಳಿದ ಹಾಸಿಗೆಗಳನ್ನು ಕೊರೋನಾ ಪೀಡಿತರಲ್ಲದ ರೋಗಿಗಳಿಗೆ ಮೀಸಲಿಡಲಾಗಿದೆ. ಕೆಲ ದಿನಗಳಿಂದ ಆಸ್ಪತ್ರೆಯ ಎಲ್ಲಾ ಹಾಸಿಗೆಗಳೂ ಭರ್ತಿಯಾಗಿವೆ. ಇನ್ನು ಈಗಾಗಲೇ ಸಿಬ್ಬಂದಿಗಳಲ್ಲೂ ಕೊರೋನಾ ಪಾಸಿಟಿವ್ ಬಂದಿದ್ದು, ಇದರೊಂದಿಗೆ ಕೆಲ ಸಿಬ್ಬಂದಿಗಳು ಕ್ವಾರಂಟೈನ್ ಗೊಳಗಾಗಿದ್ದಾರೆ. ಆಸ್ಪತ್ರೆಗೆ ಹೆಚ್ಚೆಚ್ಚು ಜನರು ಬರುತ್ತಿರುವುದರಿಂದ ಸಿಬ್ಬಂದಿಗಳು ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ವೈರಸ್ ಗೊಳಗಾಗುತ್ತಿದ್ದಾರೆಂದು ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ. 

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರದೇ ಹೋದರೆ, ಉಳಿದ ಸಿಬ್ಬಂದಿಗಳಿಗೂ ಕೊರೋನಾ ತಟ್ಟುತ್ತದೆ. ತುರ್ತುಪರಿಸ್ಥಿತಿ ವಿಭಾಗಗಳಲ್ಲಿ ರೋಗಿಗಳು ಕಾಯಲು ನಿರಾಕರಿಸುತ್ತಾರೆ. ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸುತ್ತಾರೆ. ಪರಿಸ್ಥಿತಿ ನಿಭಾಯಿಸುವುತು ತ್ರಾಸದಾಯಕವಾಗಿದೆ. ಹಲವಾರು ಸಿಬ್ಬಂದಿಗಳು ಕೆಲಸ ಮಾಡಲು ನಿರಾಕರಿಸುತ್ತಿದ್ದಾರೆ. ಮನವೊಲಿಸಿ ಕೆಲಸ ಮಾಡುವಂತೆ ಮಾಡುತ್ತಿದ್ದೇವೆ. ಹಲವು ಆಸ್ಪತ್ರೆಗಳು ನಮ್ಮ ಆಸ್ಪತ್ರೆಗೇ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಾರೆ. ಜಯನಗರ ಜನರಲ್ ಆಸ್ಪತ್ರೆಗೂ ರೋಗಿಗಳನ್ನು ಕರೆಸಿಕೊಳ್ಳಬಹುದು. ಆ ಆಸ್ಪತ್ರೆಯಲ್ಲಿ ನಮ್ಮ ಆಸ್ಪತ್ರೆಗಳಿಂದಲೂ ಉತ್ತಮವಾದ ಮೂಲಭೂತ ಸೌಕರ್ಯವಿದೆ ಎಂದು ತಿಳಿಸಿದ್ದಾರೆ. 

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಆರ್.ವೆಂಕಟೇಶಯ್ಯ ಅವರು ಮಾತನಾಡಿ, ಕೊರೋನಾ ಪೀಡಿತರು, ಕೊರೋನಾ ಪೀಡಿತರಲ್ಲದ ರೋಗಿಗಳಿಬ್ಬರಿಗೂ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇವೆ.  ಆದರೆ, ಸಿಬ್ಬಂದಿಗಳು ಸಾಕಷ್ಟು ಆತಂಕಕ್ಕೊಳಗಾಗಿದ್ದಾರೆ. ಈಗಾಗಲೇ ಆಸ್ಪತ್ರೆಯ 60 ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಲ್ಲಿ 40 ಮಂದಿ ಚೇತರಿಸಿಕೊಂಡಿದ್ದಾರೆ. ಕೆಲವರು ಇನ್ನೇನು ಕೆಲಸಕ್ಕೆ ಮರಳಲಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com