

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.
ಜು.24ರಂದು ವಿರಾಜಪೇಟೆಯ ಮೋಗರಗಲ್ಲಿ ನಿವಾಸಿ, 46 ವರ್ಷದ ಪುರುಷರೊಬ್ಬರು ಜ್ವರದಿಂದ ಬಳಲುತ್ತಿದ್ದು, ಅವರು ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ರೋಗ ಲಕ್ಷಣಗಳ ಪತ್ತೆಗಾಗಿ ವಿರಾಜಪೇಟೆಯ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಯನ್ನು ಮಾಡಿಸಿದ್ದು, ಅವರಿಗೆ ಟೈಫಾಯ್ಡ್ ಇರುವುದು ತಿಳಿದು ಬಂದಿತ್ತು.
ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಟೈಫಾಯ್ಡ್ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣ ಜು.25ರಂದು ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಭಾನುವಾರ ಬೆಳಗ್ಗಿನ ಜಾವ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದು, ಕೋವಿಡ್ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತ ದೇಹದ ಗಂಟಲು ದ್ರವ ಪರೀಕ್ಷೆಯನ್ನು ಆಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಿದ್ದು, ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಇಂದು ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕೋವಿಡ್ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ನೆರವೇರಿಸಲಾಗುವುದು. ಈ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತ ಪಟ್ಟ ಪ್ರಕರಣಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.