
ಬೆಂಗಳೂರು: ಹತಾಶ ಪದವೀಧರರು, ಸ್ನಾತಕೋತ್ತರ ಮತ್ತು ಕೌಶಲ್ಯಭರಿತ ಕೆಲಸಗಾರರು ಸೂಕ್ತ ಉದ್ಯೋಗ ಕೊರತೆಯಿಂದಾಗಿ ಮನ್ರೇಗಾ ಯೋಜನೆಯಡಿತಮ್ಮ ಹೆಸರನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಇಂತಹವರಿಗೆ ಉದ್ಯೋಗ ಮೇಳದ ಮೂಲಕ ಕೌಶಲ್ಯ ಆಧಾರಿತ ಉದ್ಯೋಗ ಕಂಡುಹಿಡಿಯುವ ಮೂಲಕ ಅವರ ರಕ್ಷಣೆಗೆ ಸರ್ಕಾರ ಮುಂದಾಗಿದೆ.ಉತ್ತಮ ಉದ್ಯೋಗಕ್ಕಾಗಿ ಕೌಶಲ್ಯಾಭಿವೃದ್ಧಿ ಇಲಾಖೆ ಸಂಪರ್ಕಿಸುವಂತೆ ಅವರಿಗೆ ನಿರ್ದೇಶಿಸಲಾಗುತ್ತಿದೆ.
ಲಾಕ್ ಡೌನ್ ಪರಿಣಾಮದಿಂದಾಗಿ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಹಿಂತಿರುಗಿದ ಸಹಸ್ರಾರು ವಲಸೆ ಕಾರ್ಮಿಕರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ 2.23 ಲಕ್ಷ ಹೊಸ ಮನ್ರೇಗಾ ಜಾಬ್ ಕಾರ್ಡ್ ಗಳನ್ನು ನೀಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 78 ಸಾವಿರದ 454 ಜನರು ಈ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಬಹುತೇಕ ಮೂರು ಪಟ್ಟು ನೋಂದಣೆ ಹೆಚ್ಚಳವಾಗಿದೆ.
ಈ ವರ್ಷ 13 ಕೋಟಿ ಮಾನವ ದಿನಗಳ ಗುರಿಯನ್ನು ಸರ್ಕಾರ ಹಾಕಿಕೊಂಡಿದ್ದು, ಕೇಂದ್ರ ಸರ್ಕಾರದ ಪಾಲು ಸೇರಿದಂತೆ 6,315.79 ಕೋಟಿಯನ್ನು ಹಂಚಿಕೆ ಮಾಡಿದೆ. ಇದರಲ್ಲಿ 3.3 ಕೋಟಿ ಮಾನವ ದಿನಗಳನ್ನು ರಾಜ್ಯಈಗಾಗಲೇ ದಾಟಿದೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ನೀಡುತ್ತಿರುವಂತೆ ದಿನವೊಂದಕ್ಕೆ 275 ರೂ. ನೀಡಲಾಗುತ್ತಿದೆ.
ಮನ್ರೇಗಾ ಯೋಜನೆಗಾಗಿ ಈ ರೀತಿಯ ನೋಂದಣಿ ಹೆಚ್ಚಳ ನಿರೀಕ್ಷಿಸಿರಲಿಲ್ಲ. ಆದರೆ, ಕೆಲಸಗಾರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಾಯಕ ಮಿತ್ರ ಮೊಬೈಲ್ ಮಿತ್ರದ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು, ಅನೇಕ ಕಾರ್ಮಿಕ ಸಂಘಟನೆಗಳು ಕೂಡಾ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ನೆರವು ನೀಡುತ್ತಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್ ಕೆ ಅತೀಕ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಪ್ರತಿ ಹೋಬಳ್ಳಿಯ ಒಂದೊಂದು ಹಳ್ಳಿಯಲ್ಲಿ ಸ್ಯಾಂಪಲ್ ಸರ್ವೆ ನಡೆಸಲಾಗುವುದು, ಈ ಹಿಂದೆ ಮಾಡುತ್ತಿದ್ದ ಕೆಲಸ, ಶೈಕ್ಷಣಿಕ ಅರ್ಹತೆ ಮತ್ತಿತರ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸಿ ವರದಿ ತಯಾರಿಸುತ್ತಾರೆ.ಜೂನ್ 25ರೊಳಗೆ ಇಂತಹ ವರದಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಲಾಗುವುದು, ಅವರು ಕೈಗಾರಿಕಾ ಕ್ಲಸ್ಟರ್ ಗಳಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಿದ್ದು, ಅಲ್ಲಿ ಪದವೀಧರ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗ ದೊರೆಯಸಲಿದೆ. ಇತ್ತೀಚಿಗೆ ಬಳ್ಳಾರಿಯಲ್ಲಿ ಸಣ್ಣ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು ಎಂದು ಅತೀಕ್ ತಿಳಿಸಿದರು.
ಉತ್ತಮ ಭವಿಷ್ಯಕ್ಕಾಗಿ ಅನೇಕ ಜನರು ಮನೇಗ್ರಾ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ, ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡಲು ಆಗುತ್ತಿಲ್ಲ. ಕೌಶಲ್ಯಭರಿತ ಅಭ್ಯರ್ಥಿಗಳನ್ನು ಕೌಶಲ್ಯಾಭಿವೃದ್ಧಿ ಇಲಾಖೆಗೆ ಕಳುಹಿಸುತ್ತೇವೆ. ಅಲ್ಲಿ ಅವರು ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗ ಪಡೆಯಬಹುದು. ಕೆಲವರು ದಿನಗೂಲಿ ನೌಕರರಂತೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೂ ಸುಮ್ಮನೆ ಮನ್ರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳುತ್ತಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.
Advertisement