

ಬೆಂಗಳೂರು: ಭಾರತ-ಚೀನಾ ನಡುವಣ ಸಂಘರ್ಷಕ್ಕೆ ಕಾರಣವಾಗಿರುವ ಪೂರ್ವ ಲಡಾಖ್ ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಗಡಿ ಮೂಲಸೌಕರ್ಯ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಶಿಯೋಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಹಿಂದೆ ಕರ್ನಾಟಕದ ಬ್ರಿಗೇಡಿಯರ್ ಒಬ್ಬರ ಪಾತ್ರ ಮಹತ್ವದ್ದಾಗಿದೆ.
ಆಗಿನ ಚೀಫ್ ಎಂಜಿನಿಯರ್ ಆಗಿದ್ದ ಕರ್ನಾಟಕ ಮೂಲದ ಡಿಎಂ ಪೂರ್ವಿಮಠ್ ಅವರ ನಾಯಕತ್ವದಲ್ಲಿ ಶಿಯೋಕ್ ನದಿಗೆ ಅಡ್ಡಲಾಗಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ 70 ಟನ್ ಸಾಮರ್ಥ್ಯದ ಸೇತುವೆ ಮತ್ತು ಪ್ರಾಜೆಕ್ಟ್ ಹಿಮಾಂಕ್ ಅಡಿಯಲ್ಲಿ 255 ಕಿ. ಮೀ. ಉದ್ದದ ಡರ್ಬುಕ್ ಮತ್ತು ದೌಲತ್ ಬೇಗ್ ಓಲ್ಡಿ ನಡುವೆ (ಡಿಎಸ್‌ಡಿಬಿಒ) ರಸ್ತೆಯನ್ನು ನಿರ್ಮಿಸಿದೆ. ಇದಕ್ಕೂ ಮೊದಲು ಲೇಹ್‌ನಿಂದ ದೌಲತ್ ಬೇಗ್ ಓಲ್ಡಿ (ಡಿಬಿಒ) ಗೆ ತಲುಪಬೇಕಾದರೆ ಎರಡು ದಿನಗಳು ಬೇಕಾಗುತಿತ್ತು.
ಗಡಿಯಲ್ಲಿ ಫೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ತರಬೇತಿ ಚಟುವಟಿಕೆಗಳಲ್ಲಿ ಕ್ರಮೇಣ ಬದಲಾವಣೆಯಾಗಿದ್ದು, ಪೂರ್ವ ವಲಯದ ಕಮಾಂಡ್ ಅಡಿಯಲ್ಲಿ ಮಿಲಿಟರಿ ಮೂಲಸೌಕರ್ಯದ ಕ್ಲಸ್ಟರ್ ವೊಂದನ್ನು ನಿರ್ಮಿಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ, ವಿಶೇಷವಾಗಿ ಗಿಲ್ಗೀಟ್ -ಬಾಲ್ಟಿಸ್ಟಾನ್ ಕಡೆಗೆ ಅವರು ಹೆಚ್ಚಿನ ಗಮನವನ್ನು ಕೇಂದ್ರಿಕರಿಸಿದ್ದಾರೆ. ಅಲ್ಲಿಯೇ ಚೀನಾ ಪಾಕಿಸ್ತಾನ ಕಾರಿಡಾರ್ ಪಾಕಿಸ್ತಾನವನ್ನು ಪ್ರವೇಶಿಸಲಿದೆ ಎಂದು ವಿಎಸ್‌ಎಂ ಮತ್ತು ಬಾರ್ (ನಿವೃತ್ತ) ಬ್ರಿಗೇಡಿಯರ್ ಡಿಎಂ ಪೂರ್ವಿಮಠ್ ಹೇಳಿದ್ದಾರೆ.
ಶಿಯೋಕ್ ನದಿ ಮೇಲೆ ಸೇತುವೆ ನಿರ್ಮಾಣಗೊಂಡ ಬಳಿಕ ದೌಲತ್ ಬೇಗ್ ಓಲ್ಡಿವರೆಗೂ ರಸ್ತೆ ನಿರ್ಮಾಣವಾಯಿತು ಮತ್ತು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆಯನ್ನು ತೆಗೆದುಹಾಕಲಾಯಿತು. ಪ್ರಯಾಣದ ಅವಧಿ 7 ಗಂಟೆಗೆ ಇಳಿಯಿತು ಎಂದು ಪೂರ್ವಿಮಠ್ ಹೇಳುತ್ತಾರೆ.
ಬ್ರಿಗೇಡಿಯರ್ ಪೂರ್ಮಿಮಠ್ ಕರ್ನಾಟಕದವರಾಗಿದ್ದು, ಇತ್ತೀಚೆಗೆ ಎನ್‌ಸಿಸಿ (ಕರ್ನಾಟಕ ಮತ್ತು ಗೋವಾ) ಉಪ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
2014ರಿಂದಲೂ ಲಡಾಖ್ ವಲಯದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಲೆಹ್ ನಲ್ಲಿ 2015 ಮತ್ತು 2018ರ ನಡುವೆ ಚೀಫ್ ಇಂಜಿನಿಯರ್ ಆಗಿದ್ದಾಗ ಶಿಯೋಕ್ ನದಿ ಸುತ್ತ ಸೇತುವೆ ನಿರ್ಮಿಸಿದ್ದೇವು. ಇದರಿಂದಾಗಿ ವರ್ಷವಿಡೀ ಸೇನೆ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಯಿತು. ಸ್ಥಳೀಯ ಸಾಮಾಗ್ರಿ ಬಳಸಿ ಸೇತುವೆ ನಿರ್ಮಿಸುವ ಹೊಸ ತಂತ್ರಜ್ಞಾನವನ್ನು ಗಡಿ ರಸ್ತೆ ಕಾರ್ಯಪಡೆ ರೂಪಿಸಿತು. ಇದು ಹಿಮಪಾತ ಮತ್ತು ಶೀತವಾತವಾರಣವನ್ನು ತಡೆದುಕೊಳ್ಳಬಲ್ಲದು ಎಂದು ಡಿಎಂ ಪೂರ್ವಿಮಠ್ ಹೇಳಿದ್ದಾರೆ.
ಮೈಕ್ರೋ ಪಿಲ್ಲಿಂಗ್ ತಂತ್ರಜ್ಞಾನವನ್ನು ಬಳಸಲಾಯಿತು. ಹಲವು ಸಲ ಭಾರೀ ನಿರ್ಮಾಣ ಉಪಕರಣಗಳನ್ನು ವಿಮಾನದಲ್ಲಿ ಸಾಗಿಸಲಾಯಿತು ಮತ್ತು ಸಾವಿರಾರು ಕಾರ್ಮಿಕರನ್ನು ಸಜ್ಜುಗೊಳಿಸಲಾಯಿತು ಮತ್ತು ಒಗ್ಗೂಡಿಸಲಾಯಿತು. ಬೇಸಿಗೆಯಲ್ಲಿ ಉಷ್ಣಾಂಶ 10 ರಿಂದ 20 ಡಿಗ್ರಿ ಇರುತಿತ್ತು. ಚಳಿಗಾಲದಲ್ಲಿ -40ಕ್ಕೆ ಇಳಿಯುತಿತ್ತು. ಆಮ್ಲಜನಕದ ಮಟ್ಟವು ಶೇಕಡಾ 50 ರಷ್ಟು ಕಡಿಮೆಯಾಗಿರುತಿತ್ತು ಎಂದು ಪೂರ್ವಿಮಠ್ ಸೇತುವೆ ನಿರ್ಮಾಣವನ್ನು ನೆನಪಿಸಿಕೊಳ್ಳುತ್ತಾರೆ.