ಬೆಂಗಳೂರು: ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿರುವ ಮಧ್ಯಪ್ರದೇಶದ 19 ಶಾಸಕರು ಸುರಕ್ಷಿತರಾಗಿದ್ದು, ಅಗತ್ಯಬಿದ್ದರೆ ಮತ್ತಷ್ಟು ಭದ್ರತೆಯನ್ನು ನೀಡಲಾಗುತ್ತದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಭದ್ರತೆ ಬಗ್ಗೆ ಪ್ರಶ್ನೆಯೇ ಇಲ್ಲ. ಮಧ್ಯಪ್ರದೇಶದ ಎಲ್ಲಾ ಶಾಸಕರು ನಗರದಲ್ಲಿ ಸುರಕ್ಷಿತರಾಗಿದ್ದಾರೆ. ಯಾರೊಬ್ಬರಿಗೂ ಯಾವುದೇ ರೀತಿಯ ಬೆದರಿಕೆಗಳಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಸಕರು ತಂಗಿದ್ದ ರೆಸಾರ್ಟ್ ಬಳಿ ಕೆಲ ಸಣ್ಣಪುಟ್ಟ ಪ್ರತಿಭಟನೆಗಲು ನಡೆದಿದ್ದವು. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಪ್ರತಿಭಟನಾಕಾರರು ಸ್ಥಳದಿಂದ ತೆರಳುವಂತೆ ಮಾಡಿದ್ದರು. ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತೀಯೊಬ್ಬ ಶಾಸಕರಿಗೂ ಪೊಲೀಸ್ ರಕ್ಷಣೆ ನೀಡಲಾಗುತ್ತದೆ. ಈ ವರೆಗೂ ಶಾಸಕರ ಜೀವಕ್ಕೆ ಯಾವುದೇ ಬೆದರಿಕೆಗಳಿಲ್ಲ. ಮುಖ್ಯ ಕೆಲಸದ ಮೇರೆಗೆ ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಬಂದಿರುವುದಾಗಿ ಶಾಸಕರು ಹೇಳಿದ್ದಾರೆ. ಶಾಸಕರು ಸುರಕ್ಷಿತವಾಗಿ ತಮ್ಮ ಕಾರ್ಯಗಳನ್ನು ಮಾಡುವುದಕ್ಕೆ ಹಾಗೂ ಬೆಂಗಳೂರಿನಲ್ಲಿ ಸುರಕ್ಷಿತರಾಗಿರುವಂತೆ ಮಾಡಲು ಭದ್ರತೆಯನ್ನು ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ನಡುವೆ ಶಾಸಕರಿರುವ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಅಧಿಕಾರಿಗಳು, ರೆಸಾರ್ಟ್ ಬಳಿ ಭದ್ರತೆಯನ್ನು ಹೆಚ್ಚಿಸಿದ್ದಾರೆಂದು ವರದಿಗಳು ತಿಳಿಸಿವೆ.
Advertisement