

ಬೆಂಗಳೂರು: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ದೇಶದ ಎಲ್ಲ ಕ್ಷೇತ್ರಗಳೂ ಗಂಭೀರ ಪರಿಣಾಮ ಎದುರಿಸುತ್ತಿದ್ದು, ಇದರಿಂದ ವಿಮಾನಯಾನ ಕ್ಷೇತ್ರದ ಮೇಲೆ ಗಂಭೀರ ಹೊಡೆತ ಬಿದ್ದಿದೆ.
ಹೌದು.. ವಿಶ್ವದ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೋನಾ ಸಾವಿನ ಮೃದಂಗ ಮುಂದುವರೆದಿರುವಂತೆಯೇ ಇತ್ತ ಭಾರತದಲ್ಲಿ ಇದರ ವ್ಯತಿರಿಕ್ತ ಪರಿಣಾಮ ನೇರವಾಗಿ ವಿಮಾನಯಾನ ಕ್ಷೇತ್ರದ ಮೇಲಾಗಿದೆ. ವಿಮಾನಯಾನ ಕ್ಷೇತ್ರ ಕೊರೋನಾ ದಾಳಿಗೆ ಮರ್ಮಾಘಾತ ಅನುಭವಿಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ಸಾದಾಕಾಲಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ.
ಒಂದು ಅಂದಾಜಿನ ಪ್ರಕಾರ ಕೆಐಎಎಲ್ ನಲ್ಲಿ ಶೇ.50 ಪ್ರಯಾಣಿಕರ ಪ್ರಮಾಣ ಕುಸಿದಿದೆ. ಈ ಕುರಿತಂತೆ ಕೆಐಎಎಲ್ ನ ವಿಮಾನ ನಿಲ್ದಾಣದ ನಿರ್ವಹಣಾ ವಿಭಾಗದ ವಕ್ತಾರರು ಮಾಹಿತಿ ನೀಡಿದ್ದು, ಅಂತಾರಾಷ್ಟ್ರೀಯ ವಿಮಾನಗಳ ಏರ್ ಟ್ರಾಫಿಕ್ ಪ್ರಮಾಣದಲ್ಲಿ ಶೇ.20ರಷ್ಟು ಕಡಿತವಾಗಿದೆ. ಪ್ರಮುಖವಾಗಿ ಫೆಬ್ರವರಿ 20ರಿಂದ ಮಾರ್ಚ್ ತಿಂಗಳಲ್ಲಿ ಶೇ.50ರಷ್ಚು ಕುಸಿತ ಕಂಡಿದೆ. ನಿತ್ಯ 14 ರಿಂದ 15 ಸಾವಿರ ಪ್ರಯಾಣಿಕರು ಕೆಐಎಎಲ್ ನಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ಈ ಸಂಖ್ಯೆ ಕೇವಲ 6 ರಿಂದ 7 ಸಾವಿರಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ವಿಮಾನಯಾನ ಕುಸಿತ ದೇಶೀಯ ವಿಮಾನಯಾನದ ಮೇಲೂ ಪರಿಣಾಮ ಬೀರಿದ್ದು, ದೇಶೀಯ ವಿಮಾನಯಾನ ಕೂಡ ಶೇ.2 ರಿಂದ 4 ರಷ್ಟು ಕುಸಿತಗೊಂಡಿದೆ ಎಂದು ಹೇಳಿದ್ದಾರೆ.