ಬೆಂಗಳೂರು: ಕ್ಷುಲ್ಲಕ ಜಗಳ; ನೈಜೀರಿಯಾ ಪ್ರಜೆಯ ಕೊಲೆ

ಸ್ನೇಹಿತರಿಬ್ಬರ ನಡುವೆ ನಡೆದ ಕ್ಷುಲ್ಲಕ ಜಗಳ ನೈಜೀರಿಯಾ ಪ್ರಜೆಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ನೇಹಿತರಿಬ್ಬರ ನಡುವೆ ನಡೆದ ಕ್ಷುಲ್ಲಕ ಜಗಳ ನೈಜೀರಿಯಾ ಪ್ರಜೆಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ.

ನೈಜೀರಿಯಾ ಪ್ರಜೆ ಜಾನ್‌ ಸಂಡೆ (30) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಮನೋಜ್‌ ಕೂಡ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಜಾನ್‌ ಸಂಡೆ ಹಾಗೂ ಮನೋಜ್ ಸ್ನೇಹಿತರಾಗಿದ್ದಾರೆ. ಅವರಿಬ್ಬರ ನಡುವೆ ಯಾವ ವಿಷಯಕ್ಕೆ ಜಗಳ ಉಂಟಾಗಿದೆ ಎಂಬುದು ತಿಳಿದುಬಂದಿಲ್ಲ.

ಕೆಲಸಕ್ಕಾಗಿ ನೈಜೀರಿಯಾದಿಂದ ಭಾರತಕ್ಕೆ ಬಂದು ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಜಾನ್ ಸಂಡೆ ನಿನ್ನೆ ರಾತ್ರಿ ಮತ್ತೋರ್ವ ಸ್ನೇಹಿತನ ಮನೆಗೆ ಹೋಗಿದ್ದಾರೆ. ಅಲ್ಲಿ ಮನೋಜ್ ಕೂಡ ಇದ್ದು, ಮದ್ಯ ರಾತ್ರಿವರೆಗೂ ಹರಟೆ ಹೊಡೆಯುತ್ತಾ ಮದ್ಯ ಪಾನ ಮಾಡುತ್ತಿದ್ದ ಅವರ ನಡುವೆ ಯಾವುದೇ ವಿಷಯಕ್ಕೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಜಾನ್‌ ತನ್ನಲ್ಲಿದ್ದ ಚಾಕುವಿನಿಂದ ಮನೋಜ್‌ನ ಹೊಟ್ಟೆಗೆ ಇರಿದಿದ್ದಾನೆ. ತಕ್ಷಣ ಮನೋಜ್ ಅದೇ ಚಾಕುವಿನಿಂದ ಜಾನ್‌ಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ.

ಅದೇ ಮನೆಯಲ್ಲಿದ್ದ ಸ್ನೇಹಿತ ತಕ್ಷಣ ಸ್ಥಳೀಯರ ನೆರವಿನಿಂದ ಮನೋಜ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪರಿಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿದ ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com