ಗುಣಮುಖರಾದ ಸೋಂಕಿತರ ಆರೋಗ್ಯದ ಮೇಲೆ ನಿಗಾವಹಿಸಲು ತಜ್ಞರ ಸಮಿತಿ ರಚನೆ

ಕೊರೋನಾ ವೈರಸ್'ನಿಂದ ಗುಣಮುಖರಾಗಿರುವ ಸೋಂಕಿತರ ಆರೋಗ್ಯದ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ವರದಿಗಳಿಂದ ತಿಳಿದಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್'ನಿಂದ ಗುಣಮುಖರಾಗಿರುವ ಸೋಂಕಿತರ ಆರೋಗ್ಯದ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದೆ ಎಂದು ವರದಿಗಳಿಂದ ತಿಳಿದಬಂದಿದೆ. 

ಪ್ರಸ್ತುತ ರಾಜ್ಯದಲ್ಲಿ 571 ಮಂದಿ ಕೊರೋನಾದಿಂದ ಗುಣಮುಖರಾಗಿದ್ದು, ಇದರಲ್ಲಿ ಸಾಕಷ್ಟು ಮಂದಿ ವೈದ್ಯಕೀಯ ಚಿಕಿತ್ಸೆಗಳನ್ನು ಮುಂದುವರೆಸಲು ಸಲಹೆಗಳನ್ನು ನೀಡಲಾಗಿದೆ. 

ಮಧ್ಯಮ ಅಥವಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೆಲ ರೋಗಿಗಳು ದೀರ್ಘಕಾಲದವರೆಗೆ ರುಚಿ ಹಾಗೂ ವಾಸನೆಯ ಗ್ರಹಿಕೆಯನ್ನು ಕಳೆದುಕೊಂಡಿರುತ್ತಾರೆ. ಕೆಲವರಿಗೆ ಕೈಕಾಲುಗಳ ಚಲನೆ ಇಲ್ಲದಿರುವುದು, ಉಸಿರಾಟ ಸಮಸ್ಯೆ, ಮಾನಸಿಕ ಸಮಸ್ಯೆಯಾದ ಅಯಾಸ ಭಾವನೆಗಳು ಎದುರಾಗಿರುತ್ತದೆ ಎಂದು ರಾಜೀವ್ ಗಾಂಧಿ ಎದೆ ರೋಗ ವಿಭಾಗ ನಿರ್ದೇಶಕ ಡಾ.ಸಿ.ನಾಗರಾಜ್ ಅವರು ತಿಳಿಸಿದ್ದಾರೆ. 

ಪ್ರಸ್ತುತ ಸರ್ಕಾರ ರಚಿಸಿರುವ ಈ ಸಮಿತಿಯಲ್ಲಿ ವೈದ್ಯರು, ಮನಶಾಸ್ತ್ರಜ್ಞರು, ಮೂಳೆ ತಜ್ಞರು, ಶ್ವಾಸಕೋಶ ತಜ್ಞರು ಸೇರಿದಂತೆ ಇನ್ನಿತರೆ ತಜ್ಞರಿದ್ದಾರೆ. 

ಸಮಿತಿಯಲ್ಲಿರುವ ಈ ತಜ್ಞರು ಕೇವಲ ಗುಣಮುಖರಾದ ಸೋಂಕಿತರ ವರದಿಗಳನ್ನಷ್ಟೇ ಸಂಗ್ರಹಿಸುವುದಷ್ಟೇ ಅಲ್ಲದೆ, ಅವರ ಆರೋಗ್ಯದ ಮೇಲೂ ನಿಗಾವಹಿಸಲಿದ್ದಾರೆಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆಯವರು ಹೇಳಿದ್ದಾರೆ.

ಕೊರೋನಾ ಸೋಂಕಿಗೊಳಗಾದವರ ಶ್ವಾಸಕೋಶ ಮತ್ತೆ ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಬಿಪಿ ಹಾಗೂ ಮಧುಮೇಹಿಗಳ ಮೇಲೂ ನಿಗಾವಹಿಸಬೇಕಿರುತ್ತದೆ. ಮತ್ತೊಮ್ಮೆ ತಮ್ಮ ಕುಟುಂಬಸ್ಥರಿಗೆ ಸೋಂಕು ತಗುಲಿ ಬಿಡಬಹುದು ಎಂಬ ಆತಂಕ ಇಂತಹವರಲ್ಲಿ ಹೆಚ್ಚಾಗಿ ಇರುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ಸೋಂಕಿತರಲ್ಲೂ ಇರುವ ಭೀತಿಯೇ ಆಗಿದೆ. ಸಾಕಷ್ಟು ಜನರಲ್ಲಿ ಮಾನಸಿಕ ಸಮಸ್ಯೆಯೇ ಹೆಚ್ಚಾಗಿರುತ್ತದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ಮನೋಶಾಸ್ತ್ರಜ್ಞರು ತಿಳಿಸಿದ್ದಾರೆ. 

ಸೋಂಕಿಗೊಳಗಾದವರಿಗೆ ಹಾಗೂ ಕ್ವಾರಂಟೈನ್ ನಲ್ಲಿದ್ದ ಜನರಿಗೆ ಆಗಾಗ ಕೌನ್ಸಿಲಿಂಗ್ ಮಾಡುವ ಅಗತ್ಯವಿರುತ್ತದೆ. ಕನಿಷ್ಟ 6 ತಿಂಗಳಾದರೂ ಇವರಿಗೆ ಕೌನ್ಸಿಲಿಂಗ್ ಅಗತ್ಯವಿರುತ್ತದೆ. ಧೂಮಪಾನ ಮಾಡುವವರು, ಮದ್ಯಪಾನಿಗಳು, ವಯೋವೃದ್ಧರು ಹಾಗೂ ಇತರೆ ಅನಾರೋಗ್ಯ ಸಮಸ್ಯೆಯುಳ್ಳಂತಹವರಲ್ಲಿ ಶ್ವಾಸಕೋಶ ದುರ್ಬಲವಾಗಿರಲಿದ್ದು, ಇಂತಹವರು ಕಟ್ಟುನಿಟ್ಟಾರ ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com