
ಬೆಂಗಳೂರು: ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿದ್ದ ಕಾಂಗ್ರೆಸ್ ಇದೀಗ ಕೊರೋನಾ ಮಟ್ಟಹಾಕಲು ಕ್ರಮಗಳನ್ನು ಕೈಗೊಂಡಿದ್ದು, ತುಮಕೂರು ಜನತೆಗೆ ವಿಟಮಿನ್ ಸಿ ಹಾಗೂ ಮಲ್ಟಿ ವಿಟಮಿನ್ ಮಾತ್ರೆಗಳನ್ನು ನೀಡಲು ಮುಂದಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಮಕೂರಿನ ಕುಣಿಗಲ್ ನಲ್ಲಿ ಈ ಮಾತ್ರೆಗಳನ್ನು ವಿತರಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಬಳಿಕ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಿದ್ದ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ಈ ಹೊಸ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ವಿಟಮಿನ್ ಸಿ ಹಾಗೂ ಮಲ್ಟಿ ವಿಟಮಿನ್ ಮಾತ್ರೆಗಳನ್ನು ಖರೀದಿ ಮಾಡಲು ಬಡವರಿಗೆ ಸಾಧ್ಯವಿಲ್ಲ. ಸೋಂಕನ್ನು ಮಟ್ಟಹಾಕಲು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಿದೆ. ಪ್ರಸ್ತುತ ರಾಜ್ಯದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ತಾಜಾ ಹಣ್ಣುಗಳಂತಹ ಕಿತ್ತಳೆ ಹಣ್ಣುಗಳನ್ನು ಪ್ರತೀನಿತ್ಯ ಸೇವನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಮಾತ್ರೆಗಳು ಜನರಿಗೆ ಸಹಾಯ ಮಾಡಲಿದೆ. ಶೀಘ್ರದಲ್ಲಿಯೇ ಕನಕಪುರದಲ್ಲಿಯೂ ಮಾತ್ರೆಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿಂದು ಸೋಂಕಿತರ ಸಂಖ್ಯೆ 2,000ಕ್ಕೆ ಏರಿಕೆಯಾಗಿದ್ದು, ಜನರಿಗೆ ಇದೀಗ ವಿಟಮಿನ್ ಇರುವ ಮಾತ್ರಗಳನ್ನು ನೀಡುವ ಅವಶ್ಯಕತೆಯಿದೆ. ಈಗಾಗಲೇ ರೂ.50 ಲಕ್ಷ ವೆಚ್ಚದ 20 ಲಕ್ಷ ಮಾತ್ರಗಳನ್ನು ವಿತರಿಸಲಾಗುತ್ತದೆ. ಮಂಗಳವಾರ ಈ ಮಾತ್ರಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೋರೋನಾ ತಜ್ಞರ ಸಮಿತಿ ಸದಸ್ಯರಾಗಿರುವ ಡಾ.ಸಿಎನ್ ಮಂಜುನಾಥ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಟಮಿನ್ ಸಿ ಹಾಗೂ ಝಿಂಕ್ ಮಾತ್ರೆಗಳನ್ನು ಶಿಫಾರಸು ಮಾಡಲಾಗುತ್ತದೆ. ಯಾವ ಮಟ್ಟದವರೆಗೂ ಅದನ್ನು ಬಳಕೆ ಮಾಡಬಹುದು ಎಂಬುದರ ಬಗ್ಗೆ ನಮ್ಮ ಬಳಿ ಅಧ್ಯಯನವಿಲ್ಲ ಎಂದಿದ್ದಾರೆ.
Advertisement