ನವದೆಹಲಿ: ಐರ್ಲೆಂಡ್ ನಲ್ಲಿ ಮೈಸೂರು ಮೂಲದ ಮಹಿಳೆ ಮತ್ತು ಅವರ ಮಕ್ಕಳಿಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ ಮೈಸೂರು ಮೂಲದ ಸೀಮಾ ಬಾನು ಸೈಯದ್ (37 ವರ್ಷ), ಮಗಳು ಅಸ್ಫಿರಾ ರಿಝಾ(11 ವರ್ಷ) ಮಗ ಫೈಜಾನ್ ಸೈಯದ್(06 ವರ್ಷ) ಅವರ ಶವಗಳು ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದೆ. ಇದು ಕೊಲೆ ಎಂದು ಶಂಕಿಸಲಾಗಿದ್ದು ಐದು ದಿನಗಳ ಹಿಂದೆ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸೀಮಾ ಬಾನು ವರ್ಷದ ಹಿಂದಷ್ಟೇ ಮೈಸೂರಿನಿಂದ ಐರ್ಲೆಂಡ್ ತೆರಳಿದ್ದರು. ಘಟನೆ ಬೆಳಕಿಗೆ ಬಂದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಸೀಮಾಳ ಗಂಡ ಸಮೀರ್ ಸೈಯದ್ ಡಬ್ಲಿನ್ ನಗರದಿಂದ ಹೊರಗಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಮೀರ್ ಸೈಯದ್ ಮೂಲತಃ ಮೈಸೂರಿನ ನಿವಾಸಿಯಾಗಿದ್ದು ದುಬೈನಲ್ಲಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ದುಬೈನಿಂದ ಐರ್ಲೆಂಡ್ ಗೆ ತೆರಳಿದ್ದು ಅಲ್ಲಿ ಹೊಸ ಉದ್ಯೋಗ ಸಿಕ್ಕಿದ್ದರಿಂದ ಕುಟುಂಬದ ಜೊತೆ ವಾಸಿಸುತ್ತಿದ್ದರು.
ಹಲವು ದಿನಗಳವರೆಗೆ ಸೀಮಾ ಕುಟುಂಬದವರು ಕಾಣಿಸಿಕೊಳ್ಳದಿದ್ದನ್ನು ಗಮನಿಸಿ ನೆರೆಹೊರೆಯವರು ಮಾಹಿತಿ ನೀಡಿದ್ದಾರೆ. ಬಳಿಕ ಐರ್ಲೆಂಡ್‌ನ ಸಶಸ್ತ್ರ ಬೆಂಬಲ ಘಟಕ ಸೀಮಾ ಮನೆಗೆ ಆಗಮಿಸಿ ಬಾಗಿಲು ಮುರಿದು ಒಳಹೊಕ್ಕಿ ನೋಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಕೊಲಿಯ ಬಳಿಕ ದುಷ್ಕರ್ಮಿ ಮನೆಯಲ್ಲಿನನೀರಿನ ಕೊಳಾಯಿಯನ್ನು ಆನ್ ಮಾಡಿ ಹೊರಟಿದ್ದರಿಂದ ನೀರು ತುಂಬಿಕೊಂಡು ಸಾಕಷ್ಟು ಹಾನಿಯು ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ ತನಿಖೆ ನಡೆಸುತ್ತಿರುವ ಪೊಲೀಸರು ಸ್ಥಳೀಯರ ಮನೆ ಮನೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಹಲ್ಲೆ ಮಾಡಿದ್ದ ದುಷ್ಕರ್ಮಿ
ಕಳೆದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದ. ಈ ಘಟನೆಯ ಬಳಿಕ ಸೀಮಾ ಅವರು ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದ್ದು ಪತಿ ಸಹಕಾರ ನೀಡುತ್ತಿದ್ದಾರೆ. ಸದ್ಯ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನ ಚಿತ್ರವನ್ನು ಬಿಡುಗಡೆ ಮಾಡಿದ್ದು, ಆತನ ಬಗ್ಗೆ ಏನಾದರೂ ಮಾಹಿತಿ ಗೊತ್ತಿದ್ದರೆ ತಿಳಿಸಿ ಎಂದು ಕುಟುಂಬಕ್ಕೆ ಪೊಲೀಸರು ಮನವಿ ಮಾಡಿದ್ದಾರೆ.
ಪಾರ್ಥೀವ ದೇಹಗಳಿಗಾಗಿ ಕುಟುಂಬದ ಮನವಿ
ಮೈಸೂರಿನ ಸೀಮಾ ಬಾನು ಕುಟುಂಬಸ್ಥರು ಭಾರತೀಯ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದ್ದು ಶವ ಊರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ತಾಯಿ, ಮಕ್ಕಳ ಹತ್ಯೆ ಬಗ್ಗೆ ಐರ್ಲೆಂಡಿನ ಭಾರತೀಯ ಪ್ರಾಧಿಕಾರ ಆಘಾತ ವ್ಯಕ್ತಪಡಿಸಿದೆ. ಶವ ತರಲು ಸುಮಾರು 15 ಲಕ್ಷ ಖರ್ಚಾಗುತ್ತದೆ. ಅಷ್ಟೊಂದು ಹಣ ನಮ್ಮ ಬಳಿ ಇಲ್ಲ. ನಮ್ಮ ಪ್ರೀತಿ ಪಾತ್ರದ ಶವವನ್ನು ಕಳುಹಿಸಿಕೊಟ್ಟರೆ ಜೀವನ ಪೂರ್ತಿ ನಿಮಗೆ ಋಣಿಯಾಗಿರುತ್ತೇವೆ. ಕೊನೆ ಒಂದು ಬಾರಿಯಾದರೂ ಅವರ ಮುಖಗಳನ್ನು ನೋಡಲು ಬಯಸಿದ್ದೇವೆ. ದಯವಿಟ್ಟು ಶವಗಳನ್ನು ಕಳುಹಿಸಿಕೊಡಿ. ನಮಗೆ ಸಹಾಯ ಮಾಡಿ ಎಂದು ಐರೀಸ್ ವೆಬ್‌ಸೈಟ್ ಆರ್‌ಟಿಐ ಜತೆ ಮಾಡಿ ಮನವಿ ಮಾಡಿದ್ದಾರೆ.
Advertisement