ಕೋವಿಡ್-19: ಬೆಂಗಳೂರಿಗರಿಗೆ ಸೋಂಕಿನ ಭಯವೇ ಇಲ್ಲ, ಮಾಸ್ಕ್ ಧರಿಸದೆ ದಂಡ ಕಟ್ಟಿದ ಪ್ರಕರಣಗಳು ಎಷ್ಟು ಗೊತ್ತಾ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕೊಂಚ ತಗ್ಗಿದ್ದೇ ತಡ.. ಜನ ಸೋಂಕಿನ ಭೀತಿಯೇ ಇಲ್ಲದೇ ಹೇಗೆ ಬೇಕೋ ಹಾಗೆ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಅದರಲ್ಲೂ ಮಾಸ್ಕ್ ಧರಿಸದೇ ಓಡಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಮಾಸ್ಕ್ ಮತ್ತು ಮಾರ್ಷಲ್ ಗಳು
ಮಾಸ್ಕ್ ಮತ್ತು ಮಾರ್ಷಲ್ ಗಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕೊಂಚ ತಗ್ಗಿದ್ದೇ ತಡ.. ಜನ ಸೋಂಕಿನ ಭೀತಿಯೇ ಇಲ್ಲದೇ ಹೇಗೆ ಬೇಕೋ ಹಾಗೆ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಅದರಲ್ಲೂ ಮಾಸ್ಕ್ ಧರಿಸದೇ ಓಡಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಕೊರೋನಾ ಸೋಂಕು ಪ್ರಸರಣ ತಡೆಯುವಲ್ಲಿ ಮಾಸ್ಕ್ ಧಾರಣೆಯ ಪಾತ್ರ ಅತ್ಯಂತ ಪ್ರಮುಖವಾದದ್ದು.. ಸೋಂಕು ಪೀಡಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹೊರಹೊಮ್ಮುವ ಡ್ರಾಪ್ ಲೆಟ್ಸ್ ಗಳನ್ನು ಈ ಮಾಸ್ಕ್ ಗಳು ತಡೆಯುತ್ತವೆ. ಆ ಮೂಲಕ ಮಾಸ್ಕ್ ಗಳು ಸೋಂಕು ಮತ್ತೋರ್ವ ವ್ಯಕ್ತಿಗೆ ಹರಡದಂತೆ  ತಡೆಯುತ್ತವೆ. ಇದೇ ಕಾರಣಕ್ಕೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ನಗರದಲ್ಲಿ ಸೋಂಕಿನ ಪ್ರಮಾಣ ತಗ್ಗುತ್ತಿದ್ದಂತೆಯೇ ನಗರದ ಜನತೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿಲ್ಲ. ಇದಕ್ಕೆ ನೈಜ ಉದಾಹರಣೆ  ಎಂದರೆ ನಗರದಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕರು ಕಟ್ಟಿರುವ ದಂಡದ ಮೊತ್ತ ದಾಖಲಾಗಿರುವ ಪ್ರಕರಣಗಳ ಸಂಖ್ಯೆ..

ಬೆಂಗಳೂರಿನ ವಿವಿಧ ವಲಯಗಳಲ್ಲಿ ದಾಖಲಾಗಿರುವ ಮಾಸ್ಕ್ ಧರಿಸದೇ ಸಾರ್ವಜನಿಕರು ಕಟ್ಟಿರುವ ದಂಡದ ಮೊತ್ತ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಬೆಂಗಳೂರನ್ನು ಬಿಬಿಎಂಪಿ 8 ವಲಯಗಳನ್ನಾಗಿ ವಿಂಗಡಿಸಿದ್ದು, ಈ ಪೈಕಿ ಪೂರ್ವ ವಲಯದಲ್ಲಿ ಅತೀ ಹೆಚ್ಚು  ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ದಕ್ಷಿಣ ಮತ್ತು ಪಶ್ಚಿಮ ವಲಯಗಳಿವೆ. ನವೆಂಬರ್ 1ರ ದತ್ತಾಂಶದ ಅನ್ವಯ ದಕ್ಷಿಣ ವಲಯದಲ್ಲಿ 3,869 ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿದ್ದು, ಇದೇ ವಲಯದಲ್ಲಿ ಮೂರನೇ ಗರಿಷ್ಚ 4,704 ಸಕ್ರಿಯ ಸೋಂಕು ಪ್ರಕರಣಗಳಿವೆ. ಇನ್ನು  ಪೂರ್ವ ವಲಯದಲ್ಲಿ 3,662 ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿದ್ದು, ಇಲ್ಲಿ 5,047 ಸಕ್ರಿಯ ಪ್ರಕರಣಗಳಿವೆ. ಇದು ನಗರದಲ್ಲೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ವಲಯವಾಗಿದೆ. ಪಶ್ಟಿಮವಲಯದಲ್ಲಿ 3,203 ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿದ್ದು, ಇಲ್ಲಿ 1,498 ಹೊಸ ಸೋಂಕು  ಪ್ರಕರಣಗಳು ಮತ್ತು 4,439 ಸಕ್ರಿಯ ಪ್ರಕರಣಗಳಿವೆ. 

ಕಳೆದ 7 ದಿನಗಳ ಅವಧಿಯಲ್ಲಿ ಈ ವಲಯಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಮಹದೇವಪುರ ವಲಯದಲ್ಲಿಯೂ 1,562 ಮಾಸ್ಕ್ ಧರಿಸದ ಪ್ರಕರಣಗಳು ದಾಖಲಾಗಿದ್ದು, ಇಲ್ಲಿ 2,256 ಹೊಸ ಸೋಂಕು ಪ್ರಕರಣಗಳು ಕಂಡುಬಂದಿವೆ.

ಈ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ವಲಯದ ವಿಶೇಷ ಅಧಿಕಾರಿ ಮುನಿಶ್ ಮೌದ್ಗಿಲ್ ಅವರು ಈ ವಲಯದಲ್ಲಿ ಮಾರ್ಷಲ್ ಗಳಿಗೆ ಟಾರ್ಗೆಟ್ ನೀಡಲಾಗಿದ್ದು, ಇದೇ ಕಾರಣಕ್ಕೆ ಇಲ್ಲಿ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಇಲ್ಲಿ ದಾಖಲಾಗುತ್ತಿರುವ ಮಾಸ್ಕ್ ಧರಿಸದ ಪ್ರಕರಣಗಳನ್ನು  ಹೊಸ ಸೋಂಕು ಪ್ರಕರಣಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಈ ಸಾಂಕ್ರಾಮಿಕ ಸಂದರ್ಭದಲ್ಲಿ ಸೋಂಕು ತಡೆಯುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಅತ್ಯಂತ ಮುಖ್ಯವಾಗಿದೆ. ಲಸಿಕೆ ಪಡೆಯುವುದಕ್ಕಿಂತ ಮಾಸ್ಕ್ ಧರಿಸುವುದರಿಂದ ಶೇ.70 ಸೋಂಕು ಪ್ರಸರಣವನ್ನು ತಡೆಯಬಹುದು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯವಾಗಿ  ಮಾಡಬೇಕು ಎಂದು ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕೋವಿಡ್ -19 ರಾಜ್ಯ ತಾಂತ್ರಿಕ ತಂಡದ ಸಲಹೆಗಾರ ಡಾ.ಗಿರಿಧರ ಬಾಬು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com