ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

2ನೇ ಹಂತದ ನಗರಗಳಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬಲಪಡಿಸಲು ಹೊಸ ಐಟಿ ನೀತಿ!

ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ 2ನೇ ಹಂತದ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರವು ಹೊಸ ಐಟಿ ನೀತಿಯನ್ನು (2020-25) ಬಿಡುಗಡೆಗೊಳಿಸಿದೆ. 
Published on

ಬೆಂಗಳೂರು: ರಾಜಧಾನಿ ಬೆಂಗಳೂರು ನಗರವನ್ನು ಹೊರತುಪಡಿಸಿ 2ನೇ ಹಂತದ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಶಕ್ತಿಶಾಲಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಸರ್ಕಾರವು ಹೊಸ ಐಟಿ ನೀತಿಯನ್ನು (2020-25) ಬಿಡುಗಡೆಗೊಳಿಸಿದೆ. 

ನ.19ರಿಂದ ಆರಂಭವಾಗುವ ಬಯೋಟೆಕ್ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಎರಡನೇ ಹಂತದ ನಗರಗಳಲ್ಲಿ ಐಟಿ ಕ್ಷೇತ್ರ ಅಭಿವೃದ್ಧಿಪಡಿಸುವ ಉಪಕ್ರಮಗಳ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥ್ ನಾರಾಯಣ ಅವರು ಮಾಹಿತಿ ನೀಡಿದರು. 

ರಾಜ್ಯದ ವಿವಿಧ ನಗರದಲ್ಲಿ ಐಟಿ ಕಂಪನಿಗಳ ಸ್ಥಾಪನೆ ಮತ್ತು ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಮಾನವ ಸಂಪನ್ಮೂಲ ಮತ್ತು ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಅಂಶಗಳನ್ನು ಐಟಿ ನೀತಿ ಒಳಗೊಂಡಿದೆ. ಇದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ಈಗಾಗಲೇ 2ನೇ ಹಂತದ ನಗರದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಪ್ರಯತ್ನಗಳು ನಡೆದಿವೆ. ಇನ್ಫೋಸಿಸ್ ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿಗೆ ಕಾರ್ಯಕ್ಷೇತ್ರ ವಿಸ್ತರಿಸುವ ದೊಡ್ಡ ಪ್ರಯತ್ನ ಮಾಡಿತು. ಇದೇ ಪ್ರಯತ್ನಗಳು ಮುಂದಿನ ದಿನಗಳಲ್ಲಿ ರಚನಾತ್ಮಕ ವೇಗ ಪಡೆಯಲಿವೆ ಎಂದು ಹೇಳಿದ್ದಾರೆ. 

ಸದ್ಯಕ್ಕೆ 5ಜಿ ಹೊಸ್ತಿಲಲ್ಲಿ ಇದ್ದೇವೆ. ಆದರೆ, 4ಜಿಯನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪ್ರಯತ್ನ ಇನ್ನೂ ಆಗಬೇಕಿದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಗಳೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗ ನಗರಗಳತ್ತ ಟೆಲಿಕಾಂ, ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಅಭಿವೃದ್ಧಿ ಹಾಗೂ ಐಟಿ ಕಂಪನಿಗಳನ್ನು ಇಡೀ ರಾಜ್ಯದೆಲ್ಲೆಡೆ ಅಸ್ತಿತ್ವ ಇರುವಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಸಾಂಕ್ರಾಮಿಕ ರೋಗ ಬಂದ ಮೇಲೆ ನಮ್ಮೆಲ್ಲರ ಸಾಂಪ್ರಾದಾಯಿಕ ಪರಿಕಲ್ಪನೆಗಳು ಬದಲಾಗಿವೆ. ಈಗ ವರ್ಕ್ ಫ್ರಂ ಎನಿವೇರ್ ಆಗಿದೆ. ಇದಕ್ಕೆ ಅತ್ಯುತ್ತಮ ನೆಟ್ ವರ್ಕಿಂಗ್ ಮಾಡಿದರೆ ಹೆಚ್ಚಿನ ಫಲಶ್ರುತಿ ಕಾಣಬಹುದು ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com