ಮಹದಾಯಿ ವಿವಾದ ಸಂಬಂಧ ಗೋವಾದಿಂದ ನ್ಯಾಯಾಂಗ ನಿಂದನೆ ಅರ್ಜಿ ತರ್ಕ ಹೀನ: ಕರ್ನಾಟಕ

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸಲ್ಲಿಕೆ ಮಾಡಿರುವ ಕರ್ನಾಟಕ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರ ತರ್ಕ ಹೀನ ಎಂದು ಕರ್ನಾಟಕ ಹೇಳಿದೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸಲ್ಲಿಕೆ ಮಾಡಿರುವ ಕರ್ನಾಟಕ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರ ತರ್ಕ ಹೀನ ಎಂದು ಕರ್ನಾಟಕ ಹೇಳಿದೆ.

ಮಹದಾಯಿ ನದಿ ತಿರುವು ಯೋಜನೆಯಿಂದ ಗೋವಾದ ಹಕ್ಕಿಗೆ ಯಾವುದೇ ಧಕ್ಕೆ ಇಲ್ಲ ಎಂದು ಕರ್ನಾಟಕ ಹೇಳಿದ್ದು, ನದಿ ಪಾತ್ರದ ಜೀವ ವೈವಿಧ್ಯ ಅಳಿಯುವ ವಿಷಯದಲ್ಲಿ ವ್ಯಕ್ತಪಡಿಸಿರುವ ಕಳವಳಕ್ಕೂ ಸ್ಪಷ್ಟನೆ ನೀಡಿದೆ. ''ನಾವು ಕೈಗೊಂಡಿರುವುದು ನೀರಾವರಿ ಯೋಜನೆ ಅಲ್ಲ. ಕೇವಲ ಕುಡಿಯುವ ನೀರಿನ ಸಣ್ಣ  ಯೋಜನೆ. ಇದಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ, ಗೋವಾ ತಕರಾರು ಎತ್ತುವುದೇ ತರ್ಕಹೀನ' ಎಂದು ಕರ್ನಾಟಕ ಹೇಳಿದೆ.

ಈ ಕುರಿತಂತೆ ಮಾತನಾಡಿದ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಗೋವಾ ಅರ್ಜಿಗೆ ನ್ಯಾಯಾಲಯದಲ್ಲಿ ಸೂಕ್ತ ಉತ್ತರ ನೀಡುತ್ತೇವೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಕಾನೂನು ಮೀರಿ ನಡೆದುಕೊಂಡಿಲ್ಲ. ಪ್ರಸ್ತುತ ಗೋವಾ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿ ಕುರಿತು ತಮಗೆ  ಮಾಹಿತಿ ಇಲ್ಲ. ಆದರೆ ಯಾವುದೇ ಅರ್ಜಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಕಳಸಾ-ಬಂಡೂರಿ ನಾಲಾ ಯೋಜನೆ ನಿಗದಿಯಂತೆ ಪೂರ್ಣಗೊಳ್ಳಲಿದೆ. ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಬೇಕಾದ ಎಲ್ಲ ರೀತಿಯ ಅನುಮತಿಗಳನ್ನೂ  ಕೇಂದ್ರ ಸರ್ಕಾರದಿಂದ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಲಾಗಿದೆ ಎಂದು ಹೇಳಿದರು.

'ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಈಗಾಗಲೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವುದರಿಂದ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ತಿರಸ್ಕಾರವಾಗಲಿದೆ. ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸುವುದಿಲ್ಲ ಎಂಬ ವಿಶ್ವಾಸ ತಮಗಿದೆ. ಮಹಾದಾಯಿ ಜಲ ವಿವಾದ  ನ್ಯಾಯಮಂಡಳಿ (MWDT)ಕರ್ನಾಟಕಕ್ಕೆ ತನ್ನ ನೀರಿನ ಪಾಲನ್ನು ನೀಡಿದೆ ಎಂದು ಹೇಳಿದರು.

ಇಷ್ಟಕ್ಕೂ ಗೋವಾ ಸರ್ಕಾರದ ವಾದವೇನು?
ಮಹದಾಯಿ ನದಿ ತಿರುವು ಯೋಜನೆ ವಿಷಯದಲ್ಲಿ ಗೋವಾ ಸರಕಾರವು ಮಂಗಳವಾರ ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದೆ. ಯೋಜನೆ ಜಾರಿ ವಿಷಯದಲ್ಲಿ ಕರ್ನಾಟಕ ಅವಸರ ಮಾಡಿದೆ. ಪ್ರಕರಣವು ಕೋರ್ಟ್‌ ವಿಚಾರಣೆ ಹಂತದಲ್ಲಿರುವಾಗಲೇ ನದಿ ತಿರುವು  ಯೋಜನೆಗೆ ಕೈ ಹಾಕಿರುವುದು ನ್ಯಾಯಾಂಗ ನಿಂದನೆಗೆ ದಾರಿ ಮಾಡಿಕೊಟ್ಟಿದೆ. ಇದನ್ನು ತಮ್ಮ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ," ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. 
ಕರ್ನಾಟಕವು ಅಧಿಕೃತ ಅನುಮತಿ ಪಡೆಯದೆಯೇ ಮಹದಾಯಿ ನದಿ ತಿರುವು ಯೋಜನೆಯನ್ನು ಕೈಗೆತ್ತಿಕೊಂಡಿದೆ. ನದಿ ಹರಿವಿನ ಜೀವ ವೈವಿಧ್ಯದ ಮೇಲೆ ಮಾರಕ ಪರಿಣಾಮ ಬೀರುವ ಈ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು. ಕೋರ್ಟ್‌ ಅಂತಿಮ ತೀರ್ಪಿಗೆ ಮೊದಲು ಯಾವುದೇ ನಿರ್ಮಾಣ ಚಟುವಟಿಕೆ ನಡೆಸಬಾರದು. ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅಂತರ್‌  ರಾಜ್ಯ ಜಲ ವಿವಾದ ನ್ಯಾಯ ಮಂಡಳಿಯು 2018ರಲ್ಲಿಯೇ ನೀರು ಹಂಚಿಕೆ ಮಾಡಿದೆ. ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದ ನೀರಿನ ಪಾಲನ್ನು ಮಂಡಳಿ ಹಂಚಿಕೆ ಮಾಡಿತ್ತು. ಆದರೆ ಇದನ್ನು ಒಪ್ಪದ ಮೂರೂ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿವೆ. ‘‘ಈ ಬಾರಿ ವಿಡಿಯೋ ಸೇರಿದಂತೆ ಹಲವು  ದಾಖಲೆಗಳ ಸಮೇತ ಕರ್ನಾಟಕದ ವಿರುದ್ಧ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನಮ್ಮ ಹಕ್ಕಿನ ರಕ್ಷಣೆಗೆ ಹೋರಾಟ ಮುಂದುವರಿಯಲಿದೆ ಎಂದು ಸಾವಂತ್‌ ತಿಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com