ಸಿಎಂ ಕಚೇರಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು, ಹೆಚ್ಚಿದ ಆತಂಕ
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಚೇರಿ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಹರಡುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.
ನಿನ್ನೆಯಷ್ಟೇ ಮತ್ತೊಬ್ಬ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸೋಂಕು ತಗುಲಿದ ವ್ಯಕ್ತಿ ಮುಖ್ಯಮಂತ್ರಿ ಕಚೇರಿ ಎರಡನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಹಿಂದೆ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿ ರಾಜಪ್ಪ, ಅವರ ಚಾಲಕ ಹಾಗೂ ಮತ್ತಿಬ್ಬರು ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ತಗುಲಿರುವುದು ಕಂಡು ಬಂದಿತ್ತು.
ಆರಂಭದಲ್ಲಿ ರ್ಯಾಪಿಂಡ್ ಆಂಟಿಜೆನ್ ಟೆಸ್ಟ್'ಗೆ ಒಳಪಡಿಸಲಾಗಿತ್ತು. ಈ ವೇಳೆ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಬಳಿಕ ಆರ್'ಟಿ-ಪಿಸಿಆರ್ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವಕ ಕಾರ್ಯದರ್ಶಿಗೂ ಈ ಹಿಂದೆ ಕೊರೋನಾ ಕಾಣಿಸಿಕೊಂಡಿತ್ತು. ಇದಾದ ಬಳಿಕ ಭೈರತಿ ಬಸವರಾಜ್ ಅವರಲ್ಲೂ ಕೂಡ ಕೊರೋನಾ ಕಾಣಿಸಿಕೊಂಡಿತ್ತು. ಇದೀಗ ಬಸವರಾಜ್ ಅವರು ಕ್ವಾರಂಟೈನ್ ನಲ್ಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

