ಆನ್'ಲೈನ್ ಶಿಕ್ಷಣ: ಮಾರ್ಗಸೂಚಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ; ಖಾಸಗಿ ಶಾಲೆಗಳಿಗೆ ಸರ್ಕಾರ ಕಠಿಣ ಎಚ್ಚರಿಕೆ

ಆನ್'ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಪುಟ್ಟ ಬದಲಾವಣೆಗಳೊಂದಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ತಜ್ಞರ ವರದಿ ಆಧರಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನ್'ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲ ಪುಟ್ಟ ಬದಲಾವಣೆಗಳೊಂದಿಗೆ ಪರಿಷ್ಕೃತ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ತಜ್ಞರ ವರದಿ ಆಧರಿಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. 

ಬೇಕಾಬಿಟ್ಟಿ ಆನ್'ಲೈನ್ ಕ್ಲಾಸ್'ನಿಂದ ಮಕ್ಕಳಿಗೆ ನೇತ್ರ ಸಮಸ್ಯೆ ಹಾಗೂ ಇನ್ನಿತರೆ ಸಮಸ್ಯೆ ಎದುರಾಗುತ್ತಿರುವ ದೂರುಗಳು ಕೇಳಿಬಂದ ಕಾರಣ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ. 

ಪ್ರಸ್ತುತ ಹೊರಡಿಸಲಾಗಿರುವ ಹೊಸ ಸುತ್ತೋಲೆಯಲ್ಲಿ ಪೂರ್ವ ಪ್ರಾಥಮಿಕ (ಎಲ್'ಕೆಜಿ-ಯುಕೆಜಿ) ತರಗತಿ ಮಕ್ಕಳಿಗೆ ಈ ಮೊದಲು ವಾರದಲ್ಲಿ 1 ದಿನ ಮಾತ್ರ ಇದ್ದ ಆನ್'ಲೈನ್ ತರಗತಿಯನ್ನು ಈಗ 3 ದಿನಗಳಿಗೆ ಹಾಗೂ 3 ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ ಇದ್ದ ಶಿಕ್ಷಣವನ್ನು 5 ದಿನಕ್ಕೆ ಹೆಚ್ಚಿಸಲಾಗಿದೆ. ಇನ್ನು 1 ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಈ ಮೊದಲು 30ರಿಂದ 45 ನಿಮಿಷಗಳು ಇದ್ದ ಪ್ರತಿ ಪಿರಿಯಡ್ ಸಮಯವನ್ನು 30 ನಿಮಿಷಕ್ಕೆ ಇಳಿಸಲಾಗಿದೆ. ಇನ್ನು ಉಳಿದ ತರಗತಿಗಳಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. 

ಸುತ್ತೋಲೆ ವಿವರಗಳನ್ನು ಗಮನಿಸುವುದಾದರೆ, ಪೂರ್ವ ಪ್ರಾಥಮಿಕ (ಎಲ್‌ಕೆಜಿ- ಯುಕೆಜಿ) ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ ಮಾತ್ರ ದಿನಕ್ಕೆ 30 ನಿಮಿಷ ಮೀರದಂತೆ ಒಂದು ಅವಧಿ (ಪಿರಿಯಡ್‌) ಶಿಕ್ಷಣ ನೀಡಬೇಕು. ಈ ವೇಳೆ ಪೋಷಕರು ಉಪಸ್ಥಿತರಿರುವುದು ಕಡ್ಡಾಯ.

ಅದೇ ರೀತಿ 1 ಮತ್ತು 2ನೇ ತರಗತಿ ಮಕ್ಕಳಿಗೆ ವಾರದಲ್ಲಿ 3 ದಿನ- ದಿನವೊಂದಕ್ಕೆ ಎರಡು ಅವಧಿಯಲ್ಲಿ (ಪ್ರತಿ ಪಿರಿಯಡ್‌ 30 ನಿಮಿಷ); 3ರಿಂದ 5ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ದಿನವೊಂದಕ್ಕೆ ಎರಡು ಅವಧಿಯಂತೆ (ಪ್ರತಿ ಪಿರಿಯಡ್‌ 30 ನಿಮಿಷ), 6ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ದಿನವೊಂದಕ್ಕೆ 3 ಅವಧಿಯಂತೆ (ಪ್ರತಿ ಪಿರಿಯಡ್‌ 30ರಿಂದ 45 ನಿಮಿಷ), 9 ಮತ್ತು 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ- ನಾಲ್ಕು ಅವಧಿಯಂತೆ (ಪ್ರತಿ ಪಿರಿಯಡ್‌ 30 ರಿಂದ 45 ನಿಮಿಷ ಮೀರದಂತೆ) ಆನ್‌ಲೈನ್‌ ತರಗತಿ ನಡೆಸಲು ಸುತ್ತೋಲೆ ಹೊರಡಿಸಲಾಗಿದೆ.

ಇನ್ನು, ಶಾಲೆಗಳು ಆನ್‌ಲೈನ್‌ ಶಿಕ್ಷಣ ನಡೆಸುವಾಗ ಈಗಾಗಲೇ ಕಳೆದ ಜೂನ್‌ 27ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಶಾಲೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಕ್ರಮ ಜರುಗಿಸುವುದಾಗಿ ಇಲಾಖೆ ಆಯುಕ್ತ ಅನ್ಬುಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮಾತನಾಡಿ, ಆದೇಶ ಉಲ್ಲಂಘನೆ ಮಾಡುವ ಶಾಲೆಗಳು ತನ್ನ ಗುರ್ತಿಯನ್ನು ಕಳೆದುಕೊಳ್ಳುವುದರ ಜೊತೆ ಜೊತೆಗೆ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com