ನಗರದಲ್ಲಿ ಮುಂದುವರೆದ ಮಳೆಯ ಅವಾಂತರ: ಕೊಡಿಗೇನಹಳ್ಳಿ ಅಂಡರ್ ಪಾಸ್ ಮುಳುಗಡೆ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಅನಾಹುತಗಳಿಂದಾಗಿ ಜನರ ನರಳಾಟ ಮುಂದುವರೆದಿದೆ. 
ಮಳೆಯಿಂದಾಗಿ ಹಾನಿಗೊಳಗಾಗಿರುವ ಕಾರು
ಮಳೆಯಿಂದಾಗಿ ಹಾನಿಗೊಳಗಾಗಿರುವ ಕಾರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಅನಾಹುತಗಳಿಂದಾಗಿ ಜನರ ನರಳಾಟ ಮುಂದುವರೆದಿದೆ. 

ಜಲಾವೃತಗೊಂಡ 20ಕ್ಕೂ ಹೆಚ್ಚು ಪ್ರದೇಶಗಳು ಹಾಗೂ ನೀರು ನುಗ್ಗಿರುವ ಮನೆ, ಅಪಾರ್ಟ್'ಮೆಂಟ್ ಜನರು ಗುರುವಾರ ಇಡೀ ದಿನ ನೀರು ಹೊರ ಹಾಕಿ ಮನೆ ಸ್ವಚ್ಛಗೊಳಿಸಲು ಪರದಾಡಬೇಕಾಯಿತು. 

ಬುಧವಾರ ಸುರಿದ ಮಳೆಯಿಂದ ಮೈಸೂರು ರಸ್ತೆಯ ನಾಯಂಡನಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆ ತಡೆಗೋಡೆ ಒಡೆದು ಪ್ರಮೋದ್ ಲೇ ಔಟ್ ಅಕ್ಷರಶಃ ದ್ವೀಪವಾಗಿ ಹೋಗಿತ್ತು. ಬಡಾವಣೆಯ ಹಲವು ಮನೆಗಳಿಗೆ ಭಾರೀ ಪ್ರಮಾಣದ ನೀರು ನುಗ್ಗಿ ಮನೆಯಲ್ಲಿದ್ದ ಪ್ರತಿಯೊಂದು ವಸ್ತು, ಆಹಾರ ಪದಾರ್ಥಗಳು ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದ ಆ ಜನರು ಎಲ್ಲವನ್ನೂ ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾಗಿದ್ದಾರೆ. 

ಇಡೀ ರಾತ್ರಿ ನಿದ್ರೆ, ಊಟವಿಲ್ಲದೆ ಪರಿತಪಿಸಿದ್ದಾರೆ. ಘಟನೆ ಬೆನ್ನಲ್ಲೇ ದೂರು ನೀಡಿದರೂ ಸ್ಥಳಕ್ಕೆ ಬರದ ಬಿಬಿಎಂಪಿ ಅಧಿಕಾರಿಗಳು ಬಳಿಕ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಎಚ್ಚೆತ್ತು ಸ್ಥಳಕ್ಕೆ ದೌಡಾಯಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಸಿದ್ದಾರೆ. ಕೆಲವೆಡೆ ಸಂತ್ರಸ್ತರಿಗೆ ತಾತ್ಕಾಲಿಕ ಬದಲೀ ಆಶ್ರಯ ಕಲ್ಪಿಸಲಾಗಿದೆ. 

ಬುಧವಾರ ರಾತ್ರಿ ಮಳೆಗೆ ಕೊಡಿಗೇನಹಳ್ಳಿ ಅಂಡರ್ ಪಾಸ್ ಮುಳುಗಡೆಯಾಗಿ ಬೆಳಗಾದರೂ ನೀರು ಖಾಲಿಯಾಗದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿತ್ತು. ಬಿಬಿಎಂಪಿ ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಿಸಿರುವುದರಿಂದ ಇಂತಹ ಸಮಸ್ಯೆಯಾಗುತ್ತಿದೆ ಎಂದು ವಾಹನ ಸವಾರರು ಕಿಡಿಕಾರಿದರು. ಓಕಳೀಪುರ, ಯಶವಂತಪುರ, ಮಲ್ಲೇಶ್ವರದ ವಿವಿಧ ಅಂಡರ್ ಪಾಸ್ ಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com