ಕೇವಲ 3 ವಾರಗಳಲ್ಲಿ ಬರೋಬ್ಬರಿ 4,202 ಆರೋಗ್ಯ ಕಾರ್ಯಕರ್ತರಿಗೆ ಒಕ್ಕರಿಸಿದ ಕೊರೋನಾ!

ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯದ ಬರೋಬ್ಬರಿ 4,202 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೇವಲ 3 ವಾರಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯದ ಬರೋಬ್ಬರಿ 4,202 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೇವಲ 3 ವಾರಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಸೋಂಕು ತಗುಲಿರುವ 4,202 ಮಂದಿ ಆರೋಗ್ಯ ಕಾರ್ಯಕರ್ತರ ಪೈಕಿ ಬೆಂಗಳೂರು ನಗರವೊಂದರಲ್ಲಿಯೇ 1,879 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದಾವಣಗೆರೆಯಲ್ಲಿ 305, ಚಿಕ್ಕಬಳ್ಳಾಪುರ 268, ರಾಯಚೂರು 184 ಮತ್ತು ಮೈಸೂರಿನಲ್ಲಿ 161 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಕೊರೋನಾ ಸೋಂಕು ತಗುಲಿದೆ. 

ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್‌ಗಳನ್ನು ಧರಿಸುವ ಮತ್ತು ಅವುಗಳನ್ನು ತೆಗೆಯುವ ಕುರಿತು ತರಬೇತಿ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಣ್ಣ ತಪ್ಪುಗಳಾದರೂ ವೈರಸ್ ತಗುಲುವ ಸಾಧ್ಯತೆಗಳಿರುತ್ತವೆ ಎಂದು ಎಂದು ರಾಜೀವ್ ಗಾಂಧಿ ಸಂಸ್ಥೆಯ ಎದೆರೋಗ ವಿಭಾಗದ ನಿರ್ದೇಶಕ ಡಾ.ಸಿ.ನಾಗರಾಜ್ ಅವರು ಹೇಳಿದ್ದಾರೆ. 

ತೀವ್ರ ಉಸಿರಾಟ ಸಮಸ್ಯೆ ಎದುರಾದಾಗ ಕೊನೆ ಗಳಿಗೆಯಲ್ಲಿ ಸೋಂಕಿತರನ್ನು ಚಿಕಿತ್ಸೆಗೆ ಕರೆತರಲಾಗುತ್ತದೆ. ಕೊರೋನಾ ಸೋಂಕು ಯಾವ ಮಟ್ಟದಲ್ಲಿರುತ್ತದೆ ಎಂಬುದು ಆರೋಗ್ಯ ಸಿಬ್ಬಂದಿಗಳಿಗೆ ತಿಳಿದಿರುವುದಿಲ್ಲ. ಈ ಸಂದರ್ಭದಲ್ಲಿ ರೋಗಿಯ ಜೊತೆಗಿರುವವರು ಆರೋಗ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಬೇಕು. ಆದರೆ, ಕೆಲವರು ಯಾವುದೇ ಮಾಹಿತಿ ನೀಡದ ಕಾರಣ ಇಂತಹ ಪ್ರಕರಣಗಳಿಂದ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಹರಡುತ್ತಿದೆ. ನಮ್ಮ ಆಸ್ಪತ್ರೆಯಲ್ಲಿಯೇ ಇಂತಹ ಪ್ರಕರಣಗಳನ್ನು ನಾನು ನೋಡಿದ್ದೇವೆಂದು ತಿಳಿಸಿದ್ದಾರೆ. 

ಸಾರ್ವಜನಿಕ ಸ್ಥಳಗಳು, ಅವರ ಮನೆಯ ಹತ್ತಿರ ಅಥವಾ ಸಾರ್ವಜನಿಕ ವಾಹನಗಳಲ್ಲಿ ಸಂಚಾರ ಮಾಡುವ ವೇಳೆಯೂ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿರುವ ಸಾಧ್ಯತೆಗಳಿರುತ್ತವೆ ಎಂದಿದ್ದಾರೆ. 

ಈ ಮೂರು ವಾರಗಳಲ್ಲಿ 24,131 ಐಎಲ್ಐ ಸಮಸ್ಯೆ ಇರುವವರು ಕಂಡು ಬಂದಿದ್ದು, 30 ಜಿಲ್ಲೆಗಳಲ್ಲಿ ಒಟ್ಟು 1,11,855 ರೋಗಿಗಳಲ್ಲಿ ಶೇಕಡಾ 59.6 ರಷ್ಟು ರೋಗಿಗಳಲ್ಲಿ ಲಕ್ಷಣಗಳು ಕಂಡು ಬಂದಿದ್ದರೆ, ಶೇ40.4 ರಷ್ಟು ಮಂದಿಯಲ್ಲಿ ರೋಗಲಕ್ಷಣಗಳಿಲ್ಲದಿರುವುದು ಕಂಡು ಬಂದಿದೆ. 

ಬೆಂಗಳೂರು, ಕೋಲಾರ, ಕೊಡಗು, ರಾಮನಗರ ಮತ್ತು ಹಾವೇರಿಯಂತಹ ಐದು ಜಿಲ್ಲೆಗಳಲ್ಲಿ ರೋಗಲಕ್ಷಣಗಳಿರುವ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 60.4 ಶೇಕಡಾ ಪುರುಷರು ಮತ್ತು 39.5 ರಷ್ಟು ಮಹಿಳೆಯರಿದ್ದಾರೆಂದು ತಿಳಿದುಬಂದಿದೆ. 

ಇನ್ನು ಯಾದಗಿರಿ, ಹಾಸನ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಸೋಂಕಿತರ ಸಂಪರ್ಕವನ್ನು ಹೆಚ್ಚಾಗಿ ಪತ್ತೆ ಹಚ್ಚುತ್ತಿರುವ ನಾಲ್ಕು ಜಿಲ್ಲೆಗಳಾಗಿವೆ ಎಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com