‘ಸದನದಲ್ಲಿ ನಮ್ಮ ನಿರ್ಧಾರಗಳ ಸಮರ್ಥಿಸಿಕೊಳ್ಳಲು ಸಂಪೂರ್ಣ ಸಿದ್ಧ’: ಸಚಿವ ಜೆ.ಸಿ.ಮಧುಸ್ವಾಮಿ

ರಾಜ್ಯದಲ್ಲಿ ಕೊರೋನಾ ಆಬ್ಬರದ ನಡುವೆ ವಿಧಾನಮಂಡಲದ ಅಧಿವೇಶನವು ಭಾರೀ ಮುಂಜಾಗ್ರತಾ ಕ್ರಮಗಳ ನಡುವೆ ಹೊಸ ಬಗೆಯಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಇತ್ತೀಚೆಗಷ್ಟೇ ಸರ್ಕಾರ ಹೊರಡಿಸಿರುವ ಎಂಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ...
ಸಚಿವ ಜೆ.ಸಿ.ಮಧುಸ್ವಾಮಿ
ಸಚಿವ ಜೆ.ಸಿ.ಮಧುಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆಬ್ಬರದ ನಡುವೆ ವಿಧಾನಮಂಡಲದ ಅಧಿವೇಶನವು ಭಾರೀ ಮುಂಜಾಗ್ರತಾ ಕ್ರಮಗಳ ನಡುವೆ ಹೊಸ ಬಗೆಯಲ್ಲಿ ಸೋಮವಾರದಿಂದ ಆರಂಭವಾಗಲಿದೆ. ಇತ್ತೀಚೆಗಷ್ಟೇ ಸರ್ಕಾರ ಹೊರಡಿಸಿರುವ ಎಂಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಸುಗ್ರೀವಾಜ್ಞೆಗಳ ಕುರಿತಂತೆ ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷಗಳು ತುದಿಗಾಲಲ್ಲಿ ನಿಂತಿದ್ದು, ಸದನದಲ್ಲಿ ನಮ್ಮ ನಿರ್ಧಾರಗಳ ಸಮರ್ಥಿಸಿಕೊಳ್ಳಲು ಸಂಪೂರ್ಣ ಸಿದ್ಧರಿದ್ದೇವೆಂದು ಸರ್ಕಾರ ಹೇಳಿದೆ. 

ವಿಧಾನಮಂಡಲ ಅಧಿವೇಶನಕ್ಕೆ ಇನ್ನೊಂದು ದಿನ ಬಾಕಿಯಿರುವ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿಯವರು ಮಾತನಾಡಿದ್ದು, ಸರ್ಕಾರದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ್ದಾರೆ. 

ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ನಡುವಲ್ಲೇ ಅಧಿವೇಶನವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ? 
ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿವೇಶನಕ್ಕೆ ಬರುವ ಎಲ್ಲಾ ಮಂತ್ರಿಗಳು ಮತ್ತು ಶಾಸಕರು 72 ಗಂಟೆಗಳ ಮೊದಲು ಕೋವಿಡ್ ಪರೀಕ್ಷೆಯನ್ನು ನಡೆಸಿರಬೇಕು. ವೈದ್ಯಕೀಯ ವರದಿ ನೆಗೆಟಿವ್ ಬಂದಿದ್ದರೆ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಸದನದೊಳಗಿನ ಸದಸ್ಯರ ನಡುವೆ ಸುರಕ್ಷಿತ ದೂರವಿರುವುದನ್ನು ಖಚಿತಪಡಿಸಿಕೊಳ್ಳಲು ಆಸನ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ ಮತ್ತು ಆಸನಗಳ ನಡುವೆ ಪಾರದರ್ಶಕ ಶೀಟ್ ಗಳನ್ನು ಹಾಕಲಾಗಿದೆ. 

ಫೇಸ್ ಮಾಸ್ಕ್ ಮತ್ತು ಶೀಲ್ಡ್'ಗಳನ್ನು ವಿತರಿಸಲಾಗುತ್ತಿದ್ದು, ಸದನಕ್ಕೆ ಪ್ರವೇಶಿಸುವಾಗ ಎಲ್ಲಾ ಸದಸ್ಯರು ಅವುಗಳನ್ನು ಧರಿಸಬೇಕಾಗುತ್ತದೆ. ಸದಸ್ಯರು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಧಾನ ಸೌಧದಲ್ಲಿ ನಾವು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ.

ಸದನದೊಳಗೆ ಹೆಚ್ಚು ಜನರು ಸೇರದಂತೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಒಬ್ಬ ಅಧಿಕಾರಿ ಮಾತ್ರ ಸಚಿವರೊಂದಿಗೆ ಬರಲು ಮತ್ತು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಮಾತ್ರ ಸದನದಲ್ಲಿರಲು ಅವಕಾಶ ನೀಡಲಾಗಿದೆ. 

ಈಗಾಗಲೇ ಸಾಕಷ್ಟು ಜನಪ್ರತಿನಿಧಿಗಳಿಗೆ ಕೊರೋನಾ ಪಾಸಿಟಿವ್ ಬಂದಿದ್ದು, 10 ದಿನಗಳವರೆಗೂ ಅಧಿವೇಶನ ನಡೆಯುತ್ತದೆಯೇ? 
ಅಧಿವೇಶನವನ್ನು ನಡೆಸಲೇಬೇಕಿದೆ. ಏಕೆಂದರೆ, ಸಾಕಷ್ಟು ಮಸೂದೆಗಳು ಬಾಕಿ ಉಳಿವೆ. ಅವುಗಳಲ್ಲಿ ಹೆಚ್ಚಿನವು ಆರ್ಡಿನೆನ್ಸ್ ರಿಪ್ಲೇಸ್ಮೆಂಟ್ ಮಸೂದೆಗಳಾಗಿವೆ, ಅವುಗಳು ಆರು ತಿಂಗಳೊಳಗೆ ಸದನದಲ್ಲಿ ಅಂಗೀಕಾರಗೊಳ್ಳಲೇಬೇಕಿದೆ. ಇಲ್ಲದೇ ಹೋದರೆ ವ್ಯರ್ಥವಾಗುತ್ತದೆ. ಸೋಮವಾರ ನಡೆಯುವ ವಿಧಾನಮಂಡಲದ ಸಲಹಾ ಸಮಿತಿ ಸಭೆಯ ಬಳಿಕ ಅಧಿವೇಶನದ ಅವಧಿ ಮತ್ತು ಇತರೆ ಅಂಶಗಳ ಕುರಿತ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಸಾಕಷ್ಟು ಶಾಸಕರಿಗೆ ಕೊರೋನಾ ಸೋಂಕು ತಗುಲುತ್ತಿರುವುದರಿಂದ ಈ ಬಾರಿ ಅಧಿವೇಶನ ಪೂರ್ಣ ಪ್ರಮಾಣದ ಅಧಿವೇಶನವಾಗದೇ ಹೋಗಬಹುದು. ಆದರೆ, ನಾವು ಸಂವಿಧಾನದ ನಿಯಮಗಳಿಗೆ ಬದ್ಧರಾಗಿದ್ದೇವೆ. 

ವಿರೋಧ ಪಕ್ಷದ ಕೆಲ ನಾಯಕರು ಪ್ರಮುಖ ವಿಚಾರಗಳು ಮತ್ತು ಮಸೂದೆಗಳ ಬಗ್ಗೆ ಚರ್ಚಿಸಲು ಅಧಿವೇಶನವನ್ನು ವಿಸ್ತರಿಸುವಂತೆ ಒತ್ತಾಯಿಸುತ್ತಿದ್ದಾರೆ. ಏನೇ ಆದರೂ, ಈ ಕುರಿತ ನಿರ್ಧಾರ ಸಮಿತಿ ಸಭೆಯ ಮೇಲೆ ಅವಲಂಬಿತವಾಗಿರುತ್ತದೆ. ಎಲ್ಲಾ ಪಕ್ಷಗಳ ನಾಯಕರೂ ಸೋಮವಾರ ಈ ಎಲ್ಲಾ ಅಂಶಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. 

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತಂತೆ ಸರ್ಕಾರದ ವಿರುದ್ಧ ಹರಿಹಾಯಲು ವಿರೋಧ ಪಕ್ಷಗಳು ಸಜ್ಜುಗೊಂಡು ನಿಂತಿವೆ. ಸರ್ಕಾರ ಇದನ್ನು ಯಾವ ರೀತಿ ಎದುರಿಸಲಿದೆ? 
ಕಾಯ್ದೆ ಮೂಲಕ ನಾವು ಯಾವುದೇ ತಪ್ಪನ್ನೂ ಮಾಡಿಲ್ಲ. ನಮ್ಮನ್ನು ನಾವು ಸಮರ್ಥಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಸದನದಲ್ಲಿ ನಮ್ಮ ನಿರ್ಧಾರಗಳನ್ನು ನಾವು ಸಮರ್ಥಿಸಿಕೊಳ್ಳಲು ಸಿದ್ಧರಿದ್ದೇವೆ. ಸದನದಲ್ಲಿ ಎಲ್ಲಾ ಆಯಾಮದಲ್ಲಿ ನಮ್ಮ ನಿರ್ಧಾರವನ್ನು ವಿವರಿಸುತ್ತೇವೆ. ನಾವು ಪಕ್ಷಪಾತ ಮಾಡುತ್ತಿಲ್ಲ. ಕೃಷಿ ಸಮುದಾಯ ಮತ್ತು ರಾಜ್ಯದ ಹಿತದೃಷ್ಟಿಯಿಂದ ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರವಿದು. 

ಮೊದಲ ದಿನದಿಂದಲೂ ವಿಪಕ್ಷದವರನ್ನು ಒಂದು ಪ್ರಶ್ನೆ ಕೇಳುತ್ತಲೇ ಬಂದಿದ್ದೇನೆ. ನೀವು ಮಾರಾಟವನ್ನು ನಿಷೇಧಿಸದಿದ್ದಾಗ, ಖರೀದಿದಾರರನ್ನೇಕೆ ನಿರ್ಬಂಧಿಸುತ್ತಿದ್ದೀರಿ? ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕೃಷಿಕನಾಗಿ, ಈ ಎಲ್ಲಾ ಅನುಭವಗಳನ್ನು ನಾನು ಅನುಭವಿಸಿದ್ದೇನೆ. ಜಮೀನು ಮಾರಾಟ ಮಾಡುವುದನ್ನು ಜನರು ನಿಲ್ಲಿಸಿಲ್ಲ. ಯಾವುದೇ ಸ್ಪರ್ಧೆಯಿಲ್ಲ ಎಂದು ಬಿಂಬಿಸುವ ಮೂಲಕ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಕೃಷಿ ಭೂಮಿ, ಆಸ್ತಿಗಳ ಮಾರಾಟವನ್ನು ನಾವು ತಡೆಯುತ್ತಿಲ್ಲ. ಕಾಂಗ್ರೆಸ್ ಭೂಮಿ ಖರೀದಿಗೆ ವಿನಾಯಿತಿ ನೀಡಿತ್ತು. ನಾವು ನಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸಜ್ಜಾಗಿದ್ದೇವೆ. 

ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಸದನದಲ್ಲಿ ಸರ್ಕಾರದ ವಿರುದ್ಧ ಹರಿಹಾಯಲು ಪ್ರತಿಪಕ್ಷಗಳು ತೆಗೆದುಕೊಳ್ಳುವ ವಿಚಾರಗಳ ಬಗ್ಗೆ ನಿಮ್ಮ ತಯಾರಿ ಏನು?
ಯಾವುದೇ ಮಸೂದೆ ಜಾರಿಗೆ ತರುವ ಮೊದಲು ನಾವು ದೀರ್ಘವಾಗಿ ಚರ್ಚಿಸಿದ್ದೇವೆ. ನಾವು ನಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುತ್ತೇವೆ. 

ರಾಜ್ಯ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಇವೆಲ್ಲಾ ಕೇವಲ ಊಹಾಪೋಹವಷ್ಟೇ. ಇದರಲ್ಲಿ ಯಾವುದೇ ರೀತಿಯ ಸತ್ಯಾಂಶಗಳಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com