ವಿಧಾನಸಭೆಯಲ್ಲಿ ಸುರೇಶ್ ಅಂಗಡಿಗೆ ಸಂತಾಪ: ಒಡನಾಟ ಸ್ಮರಿಸಿದ ಸದಸ್ಯರು

ನಿನ್ನೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿಂದು ಸಂತಾಪ ನಿರ್ಣಯ ಮಂಡಿಸಿ ಸದಸ್ಯರು ಗೌರವ ಸಲ್ಲಿಸಿದರು. ಎಲ್ಲ ಸದಸ್ಯರು ಒಂದು ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಿನ್ನೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾನಸಭೆಯಲ್ಲಿಂದು ಸಂತಾಪ ನಿರ್ಣಯ ಮಂಡಿಸಿ ಸದಸ್ಯರು ಗೌರವ ಸಲ್ಲಿಸಿದರು. ಎಲ್ಲ ಸದಸ್ಯರು ಒಂದು ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಿದರು.

ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ಸುರೇಶ್ ಅಂಗಡಿಯವರ ನಿಧನವನ್ನು ಪ್ರಕಟಿಸಿ, ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು.

ನಿರ್ಣಯ ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸುರೇಶ್ ಅಂಗಡಿಯವರ ಸಾವಿನಿಂದ ನಾವು ಸೇರಿದಂತೆ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ. ಏಮ್ಸ್ ನಂತಹ ಆಸ್ಪತ್ರೆಯಲ್ಲಿ ಇದ್ದವರಿಗೆ ಹೀಗಾದರೆ ನಮ್ಮ ಗತಿ ಏನು ಎಂಬ ಆತಂಕ ಜನಸಾಮಾನ್ಯರಲ್ಲಿ ಮೂಡಿದೆ ಎಂದರು.

ಕೃಷಿಕ ಕುಟುಂಬದಲ್ಲಿ ಹುಟ್ಟಿ, ವ್ಯಾಪಾರ ಮಾಡಿ ನಂತರ ಸಿಮೆಂಟ್ ಉದ್ಯಮ ನಡೆಸಿ, ರಾಜಕೀಯಕ್ಕೆ ಬಂದವರು, 2004ರಲ್ಲಿ ಸಂಸತ್ ಪ್ರವೇಶಿಸಿದ್ದರು. ಬಹಳ ಸ್ನೇಹ ಜೀವಿಯಾಗಿದ್ದ ಅವರು ನೇರ ನಡೆ ನುಡಿಯ ನಾಯಕರಾಗಿದ್ದರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿದ್ದರು. ರೈಲ್ವೆ ಸಚಿವರಾದ ಬಳಿಕ ಕರ್ನಾಟಕಕ್ಕೆ ಹಲವು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸುರೇಶ್ ಅಂಗಡಿ, ಸಜ್ಜನ ಮತ್ತು ಸ್ನೇಹ ಜೀವಿಯಾಗಿದ್ದರು. ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶ ಹೊಂದಿದ್ದರು. ಇವರು ಕೊರೊನಾಗೆ ಬಲಿಯಾಗುತ್ತಾರೆ ಎಂದು ಯಾರು ಕೂಡ ಭಾವಿಸಿರಲಿಲ್ಲ. ಪ್ರಖ್ಯಾತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತಿದ್ದರೂ ಅವರು ನಿಧನರಾಗಿದ್ದಾರೆ. ಇದರಿಂದ ರಾಜಕಾರಣಿಗಳಿಗೆ ಹೆಚ್ಚಿನ ಆತಂಕ ಶುರುವಾಗಿದೆ. ದೇಶದ ಅತ್ಯುನ್ನತ ಆಸ್ಪತ್ರೆಯಲ್ಲೇ ಚಿಕಿತ್ಸೆ ದೊರೆತವರು ಕೂಡ ಬದುಕುತ್ತಿಲ್ಲ. ಅಂತಹವರಲ್ಲಿ ನಮ್ಮ ಪಾಡೇನು ಎಂಬ ಆತಂಕ ಕಾಡುತ್ತಿದೆ ಎಂದರು.

ಅಂಗಡಿಯವರು ಅನೇಕ ಯೋಜನೆಗಳಿಗೆ ಜೀವ ತುಂಬಿದ್ದರು. ಬಾದಾಮಿ ಹತ್ತಿರ ರೈಲ್ವೆ ಮೇಲ್ಸೇತುವೆ ನಿರ್ಮಿಸಿಕೊಡುವಂತೆ ತಾವು ಕೂಡ ಅವರಿಗೆ ಮನವಿ ಮಾಡಿದ್ದೆ, ಅದನ್ನೂ ಮಾಡಿಕೊಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ಅದಕ್ಕೂ ಮೊದಲು ಕಾಲಾಧೀನರಾಗಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದರು.

ಉಪ ಸಭಾಧ್ಯಕ್ಷ ಆನಂದ್ ಮಾಮನಿ ಮಾತನಾಡಿ, ಶೈಕ್ಷಣಿಕವಾಗಿಯೂ ಹಲವು ಸಾಧನೆ ಮಾಡಿದ್ದ ಸುರೇಶ್ ಅಂಗಡಿ, ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ತೊಡಗಿಸಿಕೊಂಡಿದ್ದರು. ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರು ರೈಲ್ವೆ ಸಚಿವರಾಗಿ ಮಾಡಿದ ಕೆಲಸ ಅಪಾರವಾದುದು ಎಂದು ಬಣ್ಣಿಸಿದರು.

ಬಂಡೆಪ್ಪ ಕಾಶೆಂಪುರ್, ಮಾತನಾಡಿ, ಸುರೇಶ್ ಅವರ ನಿಧನರಿಂದ ರಾಜ್ಯ ಒಬ್ಬ ಅತ್ಯುನ್ನತ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅಜಾತಶತ್ರುವಾಗಿದ್ದ ಅವರು ನಾಲ್ಕು ಬಾರಿ ಸತತ ಸಂಸದರಾಗಿ ಆಯ್ಕೆಯಾಗಿ, ರೈಲ್ವೆ ಖಾತೆ ಸಚಿವರಾಗಿ ಬಹಳಷ್ಟು ಯೋಜನೆಗಳಿಗೆ ಉತ್ಸುಕತೆಯಿಂದ ಚಾಲನೆ ನೀಡಿದ್ದರು. ಮುಖತಃ ಭೇಟಿಯಾದಾಗ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿದರು.

ಆರ್.ವಿ.ದೇಶಪಾಂಡೆ ಮಾತನಾಡಿ, ಸುರೇಶ್ ಅಂಗಡಿ ಸಜ್ಜನ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ, ರಾಜ್ಯಕ್ಕೆ ಅಪಾರ ಹಾನಿಯಾಗಿದೆ. ರೈಲ್ವೆ ಸಚಿವರಾಗಿ ಹಲವು ಯೋಜನೆಗೆ ಜಾರಿಗೆ ಮುಂದಾಗಿದ್ದರು. ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವು ಭರಿಸಲಿ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ, ಶಾಸಕ ಡಿ.ಕೆ.ಶಿವಕುಮಾರ್, ಯಮನಿಗೆ ಯಾರ ಬಗ್ಗೆಯೂ ಕರುಣೆಯಿಲ್ಲ, ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಸಂದರ್ಭ ಬಂದಿದೆ. ಯಾವ ದುರಭ್ಯಾಸವೂ ಇಲ್ಲದ ಸುರೇಶ್ ಅಂಗಡಿ ನಿಧನದಿಂದ ನಮ್ಮ ಮನಸ್ಸು, ಜೀವ ಎರಡೂ ಚಂಚಲವಾಗಿದೆ. ನಾವು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಅವರ ನಿಧನದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು.

ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸುರೇಶ್ ಅಂಗಡಿ ಅವರು ಸರಳ ಸಜ್ಜನಿಕೆ ಮತ್ತು ಹೃದಯ ವೈಶಾಲ್ಯತೆಯ ನಾಯಕರಾಗಿದ್ದರು. ರಾಜ್ಯದ ಅಭಿವೃದ್ಧಿ ಬಗ್ಗೆ ಅಪಾರ ಕನಸು ಹೊಂದಿದ್ದರು. ಹುಬ್ಬಳ್ಳಿ-ಅಂಕೋಲಾ ರೈಲ್ವೆಗೆ ವಿನಂತಿಸಿಕೊಂಡಾಗ ಅದರ ಬಗ್ಗೆ ಉತ್ಸಾಹದಿಂದ ಕೆಲಸ ಆರಂಭಿಸಿದ್ದರು. ಕಿಸಾನ್ ರೈಲಿಗೂ ಕೂಡ ಚಾಲನೆ ನೀಡಿದ್ದರು ಎಂದು ಸ್ಮರಿಸಿದರು.

ಎಚ್.ಕೆ.ಪಾಟೀಲ್ ಮಾತನಾಡಿ, ಹತ್ತು ಹಲವು ಕೆಲಸ ಮಾಡುವ ಮೂಲಕ ಸುರೇಶ್ ಅಂಗಡಿ ಹೆಚ್ಚು ಜನಪ್ರಿಯತೆ ಹೊಂದಿದ್ದರು. ಸೂಕ್ಷ್ಮ ಹಾಗೂ ಸ್ನೇಹ ಜೀವಿಯಾಗಿದ್ದ ಅವರ ನಿಧನ ನಮಗೆ ಅಪಾರ ನಷ್ಟವಾಗಿದೆ ಎಂದರು.

ಬಸವನಗೌಡ ಪಾಟೀಲ್ ಯತ್ನಾಳ್, ಸುರೇಶ್ ಅಂಗಡಿ ನಿಧನದಿಂದ ಆಘಾತಗೊಂಡಿದ್ದೇನೆ. ಏಮ್ಸ್ ನಂತಹ ದೊಡ್ಡ ಸಂಸ್ಥೆಯಲ್ಲಿಯೇ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ನಾವು ಕೋವಿಡ್ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ವಾರಕ್ಕೆ ಎರಡು ಬಾರಿ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ತಮಗೆ ಕೊರೊನಾ ಬಂದಾಗ ಖಾಸಗಿ ಆಸ್ಪತ್ರೆಯೊಂದು 3.80 ಲಕ್ಷ ಮೂರು ದಿನಕ್ಕೆ ಬಿಲ್ ಮಾಡಿದೆ. ಶಾಸಕರಾದ ನಮಗೇ ಇಷ್ಟು ಬಿಲ್ ಮಾಡಿದ್ದರೆ ಜನಸಾಮಾನ್ಯರ ಪಾಡೇನು? ಬೇಕಾಬಿಟ್ಟಿಯಾಗಿ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿವೆ. ಸರ್ಕಾರ ಏನು ಮಾಡುತ್ತಿದೆ? ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವಿದೆ ? ಎಂದು ಪ್ರಶ್ನಿಸಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸರಳ, ಸಜ್ಜನಿಕೆ, ಸಂಸ್ಕೃತಿಯ ಅಂಗಡಿ ಅವರ ನಿಧನದಿಂದ ನಮ್ಮ ಕ್ಷೇತ್ರ ಬಡವಾಗಿದೆ. ಒಳ್ಳೆಯ ಕೆಲಸ ಮಾಡಿದವರನ್ನು ಬೆಂಬಲಿಸುವ ಧೈರ್ಯ ಅವರಿಗೆ ಇತ್ತು. 82 ವರ್ಷದ ಅವರ ತಾಯಿಯೊಂದಿಗೆ ತಮಗೆ ಬಹಳ ಒಡನಾಟವಿತ್ತು. ನಾನು ಅವರ ವಿರುದ್ಧ ಸ್ಪರ್ಧಿಸಿದ್ದೆ, ಆದರೆ ನಾವಿಬ್ಬರೂ ಎಲ್ಲೂ ಸಭ್ಯತೆ ಮೀರಲಿಲ್ಲ. ಅವರ ನಿಧನದಿಂದ ತಮಗೆ ಬಹಳ ನೋವಾಗಿದೆ ಎಂದು ಭಾವುಕರಾಗಿ ಮಾತನಾಡಿದರು.

ಜಿ.ಸೋಮಶೇಖರ್ ರೆಡ್ಡಿ ಮಾತನಾಡಿ, ಅಂಗಡಿಯವರ ಅಕಾಲಿಕ ಮರಣ ಕರ್ನಾಟಕ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ, ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

ಮಹಂತೇಶ್ ಕೌಜಲಗಿ ಮಾತನಾಡಿ, ಸುರೇಶ್ ಅವರು ಅಭಿವೃದ್ಧಿ ಕೆಲಸವನ್ನು ಉತ್ಸುಕತೆಯಿಂದ ಮಾಡುತ್ತಿದ್ದರು, ಕ್ಷೇತ್ರದ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಅಭಿವೃದ್ಧಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುತ್ತಿರಲಿಲ್ಲ, ಅಂತಹ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ನಿಧನ ರಾಜ್ಯಕ್ಕೆ ಭಾರೀ ನಷ್ಟ ಉಂಟುಮಾಡಿದೆ ಎಂದರು.

ಅಭಯ್ ಪಾಟೀಲ್ ಮಾತನಾಡಿ, ಸುರೇಶ್ ಅಂಗಡಿ ನಿಧನದಿಂದ ಬೆಳಗಾವಿ ಭಾಗಕ್ಕೆ ಅಪಾರ ನಷ್ಟವಾಗಿದೆ. ಅನೇಕ ಯುವಕರಲ್ಲಿ ನಾಯಕತ್ವ ಗುಣ ಬೆಳೆಸಿ ಅವರನ್ನು ನಾಯಕರಾಗಿ ಮಾಡಿದ್ದರು. ಬೆಳಗಾವಿಗೆ ಅನೇಕ ಸಂಸ್ಥೆಗಳು ಬರಲು ಅವರು ಕಾರಣ. 72 ಸಾವಿರ ಲೀಡ್ ನಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದಿದ್ದರು. ಅದಕ್ಕೆ ಅವರು ತಮಗೆ ಕೃತಜ್ಞತೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸುರೇಶ್ ಅಂಗಡಿ ನಿಧನ ಸುದ್ದಿ ಆಘಾತ ತಂದಿದೆ. ಅಕಾಲಿಕ ಮರಣದಿಂದ ತೀವ್ರ ನೋವು, ದುಃಖ ಉಂಟಾಗಿದೆ. ಬೆಳಗಾವಿ ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಸಾರ್ವಜನಿಕ ಜೀವನ ಆರಂಭಿಸಿದ್ದ ಅವರು 4 ಬಾರಿ ಸಂಸದರಾಗಿ, ಇತ್ತೀಚೆಗೆ ಮೋದಿ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು ಎಂದರು.

ಕರ್ನಾಟಕ ರೈಲಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಹೊಸ ಯೋಜನೆ ಮತ್ತು ಹಳೆ ಯೋಜನೆಗಳಿಗೆ ಚಾಲನೆ ನೀಡಿದ್ದರು. ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡಿದ್ದರು. ಪ್ರಾಮಾಣಿಕ ಹಾಗೂ ಜನಾನುರಾಗಿ ನಾಯಕರಾಗಿದ್ದರು. ಎರಡು ದಿನಗಳ ಹಿಂದೆ ಆರೋಗ್ಯ ಸುಧಾರಣೆಯಾಗಿದೆ ಎಂಬ ಆತ್ಮವಿಶ್ವಾಸದ ಮಾತನ್ನು ಅವರ ಶ್ರೀಮತಿಯವರು ಹೇಳಿದ್ದರು. ಆದರೆ ಕೊರೊನಾ ಯಾರನ್ನು ಬಿಡುವುದಿಲ್ಲ ಎಂಬುದಕ್ಕೆ ಸುರೇಶ್ ಕುಮಾರ್ ಸಾವು ನಿದರ್ಶನ. ಎಲ್ಲರ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡು ನಗುನಗುತ್ತಾ ಕೆಲಸ ಮಾಡಿದವರು. ಇಂತಹ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ನೀಡಲಿ ಎಂದು ಹೇಳಿದರು.

ಸಭಾಧ್ಯಕ್ಷ ಕಾಗೇರಿ ಮಾತನಾಡಿ, ತಮಗೂ ಅವರೊಂದಿಗೆ ನಿಕಟ ಸಂಪರ್ಕ ಇತ್ತು. ಬಹಳ ಹತ್ತಿರದಿಂದ ನೋಡಿದ್ದೇನೆ. ಸರಳ, ಸುಸಂಸ್ಕೃತ ರಾಜಕಾರಣಿಯಾಗಿದ್ದರು. ಅಜಾತಶತ್ರು ವ್ಯಕ್ತಿತ್ವ ಹೊಂದಿದ್ದರು. ಬಹಳ ಧಾರ್ಮಿಕ ವ್ಯಕ್ತಿಯೂ ಆಗಿದ್ದರು. ಈ ರೀತಿಯ ವ್ಯಕ್ತಿತ್ವಕ್ಕೆ ಅವರ ತಾಯಿಯ ಕೊಡುಗೆ ಇದೆ ಎಂದು ಹೇಳಿದರು.

ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿ, ಸಂತಾಪ ಸೂಚಕ ನಿರ್ಣಯವನ್ನು ಸುರೇಶ್ ಅಂಗಡಿ ಕುಟುಂಬಕ್ಕೆ ಕಳುಹಿಸಿಕೊಡುವುದಾಗಿ ಹೇಳಿ ಸ್ಪೀಕರ್ ಅರ್ಧಗಂಟೆ ಕಲಾಪ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com