ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು: ಎಚ್ ಡಿ ಕುಮಾರಸ್ವಾಮಿ

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ' ಹಾಕಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಿನ್ನೆ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್ ಡಿ ಕುಮಾರಸ್ವಾಮಿ ಅವರು, 'ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ  ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲು ಮುಂದಾಗಿದ್ದ ಪೊಲೀಸರು, ವೈದ್ಯಕೀಯ, ಬಿಬಿಎಂಪಿ ಸಿಬ್ಬಂದಿಗಳ ಮೇಲೆ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಖಂಡನೀಯ. ಮುಲಾಜಿಲ್ಲದೆ ಅಂಥವರ ವಿರುದ್ಧ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು ಎಂದು  ಹೇಳಿದ್ದಾರೆ.

ಅಂತೆಯೇ 'ದೇಶದ ಕಾನೂನಿಗೆ ವ್ಯತಿರಿಕ್ತವಾಗಿ  ನಡೆದುಕೊಳ್ಳುವವರನ್ನು ಮುಲಾಜಿಲ್ಲದೆ 'ಬಲಿ'  ಹಾಕಬೇಕು. ಇಡೀ ಜಗತ್ತು ಎದುರಿಸುತ್ತಿರುವ  ಕರೋನಾ ವೈರಸ್ ವಿರುದ್ಧ ಜನತೆ ಸಂಘರ್ಷ ಮಾಡುತ್ತಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ  ಧರ್ಮದ ಗುರಾಣಿಯನ್ನು ಅಡ್ಡ ತಂದು ವ್ಯವಸ್ಥೆ  ಬುಡಮೇಲು ಮಾಡುವುದನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಡಳಿತ ವ್ಯವಸ್ಥೆಯ ನೈತಿಕ ಬಲ ಕುಗ್ಗಿಸುವ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿ ದಂಗೆ  ಏಳುವವರರ ಹೆಡೆಮುರಿ ಕಟ್ಟಬೇಕು ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ಕೊರೋನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಮಂದಿಯನ್ನು ಕ್ವಾರಂಟೈನ್ ಮಾಡಲು ಹೋಗಿದ್ದ ಪೊಲೀಸರು, ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ಮೇಲೆ ಪಾದರಾಯನಪುರದ ನಿವಾಸಿಗಳ ಪೈಕಿ ಕೆಲವರ ಗುಂಪು ಹಲ್ಲೆ ಮಾಡಿತ್ತು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು  ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರೋದನ್ನು ಗಮನಿಸಿದ ಪುಡಿ ರೌಡಿಗಳು ದಾಂಧಲೆಯನ್ನು ನಡೆಸಿದ್ದರು. ಈ ವೇಳೆ ಪೊಲೀಸರೇ ಕೈ ಮುಗಿದು ಹೀಗೆ ಮಾಡಬೇಡಿ ಎಂದು ಬೇಡಿಕೊಂಡರೂ ಕೇಳದ ಪುಂಡರು, ಪೊಲೀಸರ ಮೇಲೆ ಹಲ್ಲೆ  ಮಾಡಿದ್ದಾರೆ. ಅಲ್ಲದೆ ಪೊಲೀಸರು ನಿರ್ಮಿಸಿಕೊಂಡಿದ್ದ ಟೆಂಟ್ ಮತ್ತು ಟೇಬಲ್ ಗಳನ್ನು ಮುರಿದು ಕೌರ್ಯ ಮೆರೆದಿದ್ದರು. ಮಹಿಳೆಯರೂ ಎಂದೂ ನೋಡದೆ ಆಶಾ ಕಾರ್ಯಕರ್ತೆಯರನ್ನೂ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆಗೆ ಮುಂದಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com