ಕಡಿಮೆಯಾಗದ ಮಳೆ ಆರ್ಭಟ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು!

ರಾಜ್ಯಾದ್ಯಂತ ಶನಿವಾರವೂ ಎಡೆಬಿಡದೆ ಭಾರಿ ಮಳೆಯಾಗಿದ್ದು ಪರಿಣಾಮ ರಾಜ್ಯದಲ್ಲಿನ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ರಾಜ್ಯದ ಮತ್ತಷ್ಟು ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕುವ ಭೀತಿ ಎದುರಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಚಿವರ ಪರಿಶೀಲನೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಚಿವರ ಪರಿಶೀಲನೆ

ಬೆಂಗಳೂರು: ರಾಜ್ಯಾದ್ಯಂತ ಶನಿವಾರವೂ ಎಡೆಬಿಡದೆ ಭಾರಿ ಮಳೆಯಾಗಿದ್ದು ಪರಿಣಾಮ ರಾಜ್ಯದಲ್ಲಿನ ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ರಾಜ್ಯದ ಮತ್ತಷ್ಟು ಜಿಲ್ಲೆಗಳು ಪ್ರವಾಹದ ಹೊಡೆತಕ್ಕೆ ಸಿಲುಕುವ ಭೀತಿ ಎದುರಾಗಿದೆ.

ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಶನಿವಾರವೂ ಆಲಮಟ್ಟಿ, ನಾರಾಯಣಪುರ, ಕೃಷ್ಣರಾಜಸಾಗರ ಜಲಾಶಯಗಳಿಂದ ನೀರನ್ನು ನದಿಗೆ ಹರಿಸಲಾಗಿದ್ದು, ಕೆಲವೆಡೆ ಪ್ರವಾಹ ಸ್ಥಿತಿ  ಎದುರಾಗಿದೆ. ರಾಜ್ಯದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಆದರೆ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಎರಡು ದಿನಗಳ ಭಾರೀ ಮಳೆಯ ನಂತರ ಬ್ರಹ್ಮಗಿರಿ ಶ್ರೇಣಿಯಲ್ಲಿ ಶನಿವಾರ ಮಳೆ ಕಡಿಮೆಯಾಗಿತ್ತು.  ಶನಿವಾರವೂ ಕೂಡ ಕೊಡಗು ಮತ್ತು ಚಿಕ್ಕಮಗಳೂರಿನ ಕೆಲವೆಡೆ ಭೂಕುಸಿತ ಸಂಭವಿಸಿದೆ. ಅದಷ್ಟವಶಾತ್ ಯಾವುದೇ ರೀತಿಯ ಸಾವು-ನೋವು ಸಂಭವಿಸಿಲ್ಲ.

ಕಬಿನಿ ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಮೈಸೂರು-ಕಲ್ಲಿಕೋಟೆ ನಡುವಿನ ಹೆದ್ದಾರಿ ಕೂಡ ಜಲಾವೃತ್ತವಾಗಿದ್ದು, ಸಂಚಾರ ಸ್ಥಗಿತವಾಗಿದೆ. ಇನ್ನು ದಕ್ಷಿಣ ಕನ್ನಡದ ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಹಲವು ಪ್ರದೇಶಗಳು ನೇತ್ರಾವತಿ ನದಿಯ ಪ್ರವಾಹದಿಂದಾಗಿ ಜಲಾವೃತವಾಗಿದೆ. ಸುಳ್ಯದ ಹಲವು  ಮನೆಗಳಿಗೆ ನೀರು ನುಗ್ಗಿದ್ದು, ಭೂಕುಸಿತ ಕೂಡ ಸಂಭವಿಸಿದೆ. ಜಿಲ್ಲೆಯಲ್ಲಿ ಎನ್ ಡಿಆರ್ ಎಫ್ ತಂಡ ಯಾವುದೇ ಪರಿಸ್ಥಿತಿ ಎದುರಿಸಲು ಸರ್ವಸನ್ನದ್ಧವಾಗಿ ನಿಂತಿವೆ. ಇನ್ನು ಧಾರವಾಡದ ಬೆನ್ನಿ ಹಳ್ಳ ಮತ್ತು ತುಪ್ಪರ ಹಳ್ಳದ ಪ್ರವಾಹದಿಂದಾಗಿ ನವಲಗುಂದ ತಾಲೂಕಿನ ಹಲವು ಗ್ರಾಮಗಳು ಪ್ರವಾಹ ಭೀತಿ  ಎದುರಿಸುತ್ತಿವೆ.

ರಾಜ್ಯದ ಜಲಾಶಯಗಳಿಗೆ ಅತ್ಯಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯಗಳಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಜಲಾಶಯಗಳ ಕೆಳ ಭಾಗದಲ್ಲಿರುವ ಗ್ರಾಮಗಳಿಗೆ ನೀರು ನುಗ್ಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಪ್ರವಾಹ ಪೀಡಿತ ಗ್ರಾಮಗಳ ಜನರನ್ನು  ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇತ್ತ ಪರಿಸ್ಥಿತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸಿ.ಎಂ ಗೋವಿಂದ ಕಾರಜೋಳ ಸೇರಿದಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ಪರಿಸ್ಥಿತಿಯನ್ನು ಪರಿಶೀಲಿಸಿ, ಪರಿಹಾರ, ರಕ್ಷಣೆ ಮತ್ತು ಪುನರ್ವಸತಿ ಕುರಿತು ಅಧಿಕಾರಿಗಳೊಂದಿಗೆ ಸಭೆ  ನಡೆಸಿದರು. ಅಲ್ಲದೆ ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವರ್ಚುವಲ್ ಸಭೆ ಮೂಲಕ ಮಾಹಿತಿ ನೀಡಿದರು.

ಸಚಿವರಿಂದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ
ಇನ್ನು ಕಂದಾಯ ಸಚಿವ ಆರ್ ಅಶೋಕ್ ಅವರು ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಅಪಾಯಕ್ಕೆ ಸಿಲುಕಿರುವ ಜನರನು ರಕ್ಷಿಸುವಂತೆ ಸೂಚಿಸಿದರು. ಅಗತ್ಯ ಬಿದ್ದರೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನೂ ಬಳಸಿಕೊಳ್ಳುವಂತೆ  ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇತ್ತ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಚಿಕ್ಕೋಡಿಗೆ ಭೇಟಿ ನೀಡಿ ಕೃಷ್ಣ ನದಿ ಪಾತ್ರದ ಪ್ರವಾಹದ ಕುರಿತು ಪರಿಶೀಲನೆ ನಡೆಸಿದರು. 

ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರವಾಹದಲ್ಲಿ ಅಡಿಕೆ ಬೆಳೆ ಕಳೆಕೊಂಡ 9 ರೈತರಿಗೆ ನೆರವು ನೀಡುವಂತೆ ಸೂಚನೆ ನೀಡಿದರು. ಇನ್ನು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ  ಪ್ರವಾಸೋಧ್ಯಮ ಸಚಿವ ಸಿಟಿ ರವಿ ಅವರು ಪ್ರವಾಹದಿಂದಾಗಿ ಕೊಚ್ಚಿ ಹೋದ ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಅವರೊಂದಿಗೆ ಯಗಚಿ ಡ್ಯಾಮ್ ಗೆ ತೆರಳಿ ಬಾಗಿನ ಸಮಪರ್ಪಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಮಿ ಅವರು  ಹಾವೇರಿ ಜಿಲ್ಲೆಯ ವರದ ನದಿ ಪ್ರವಾಹಕ್ಕೆ ತುತ್ತಾದ ಹಾನಗಲ್ ತಾಲೂಕಿನ ಕುಡಲಾ, ನೆರೆಗಲ್ ಮತ್ತು ಸವಣೂರು ತಾಲೂಕಿನ ತಾವರೆಮೆಳ್ಳಾಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com