ಖಾಸಗಿ ಆಸ್ಪತ್ರೆಗಳ ಅವಾಂತರ; ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ

ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಅಸಮರ್ಪಕ ನಿರ್ವಹಣೆ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ದೂರು ಬಂದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಸಮಿತಿ ಸಭೆ ನಡೆಸಿದ್ದು, ಸಭೆಯಲ್ಲಿ ಮಹತ್ತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಎಚ್. ಕೆ. ಪಾಟೀಲ್
ಎಚ್. ಕೆ. ಪಾಟೀಲ್

ಬೆಂಗಳೂರು: ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಅಸಮರ್ಪಕ ನಿರ್ವಹಣೆ, ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದಿರುವ ಬಗ್ಗೆ
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ದೂರು ಬಂದ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಹೆಚ್.ಕೆ. ಪಾಟೀಲ್ ಸಮಿತಿ ಸಭೆ ನಡೆಸಿದ್ದು, 
ಸಭೆಯಲ್ಲಿ ಸಿಸಿಟಿವಿ ಮೂಲಕ ರೋಗಿಗಳ ಮಾನಿಟರ್, ಸಿಎಜಿ ವಿಶೇಷ ಆಡಿಟರ್ ನಡೆಸುವುದು ಸೇರಿದಂತೆ ಇನ್ನಿತರ ಮಹತ್ತರ 
ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಸದಸ್ಯರಾದ ರಮೇಶ್ ಕುಮಾರ್, ರವಿ ಸುಬ್ರಹ್ಮಣ್ಯ, ನಾರಾಯಣಸ್ವಾಮಿ, ಸಿ.ಎಂ.ಇಬ್ರಾಹಿಂ, ಎ.ಟಿ.ರಾಮಸ್ವಾಮಿ, 
ಸಿ.ಎನ್. ಬಾಲಕೃಷ್ಣ, ಡಿ.ಸಿ.ನಾಗೇಶ್, ಸತೀಶ್ ರೆಡ್ಡಿ ಬಿಬಿಎಂಪಿ ಆಯುಕ್ತರು ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

ಸಭೆಯಲ್ಲಿ ಕೋವಿಡ್ ಕೇಂದ್ರಗಳ ಬಗ್ಗೆ ಬಿಜೆಪಿಯ ಸದಸ್ಯರೂ ಸೇರಿದಂತೆ ಕಾಂಗ್ರೆಸ್ ನ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸಭೆಯಲ್ಲಿ ಒಮ್ಮತದ ತೀರ್ಮಾನದಂತೆ ಸಿಎಜಿಯಿಂದ ವಿಶೇಷ ಆಡಿಟ್ ನಡೆಸುವ ಬಗ್ಗೆ ಹಾಗೂ ಐಸಿಯುಗೆ ಸಿಸಿಟಿವಿ ಅಳವಡಿಕೆ  ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. 

ಸಭೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಖಾಸಗಿ ಆಸ್ಪತ್ರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಬೆಂಗಳೂರಿನ ಕೆಲ ಖಾಸಗಿ
ಆಸ್ಪತ್ರೆಗಳಲ್ಲಿ ಹೀನಾಯಸ್ಥಿತಿ ಇದೆ. ಸೋಂಕಿತರಿಗೆ ಕೈಕಾಲು ಕಟ್ಟಿ ಚಿಕಿತ್ಸೆ ನೀಡಲಾಗುತ್ತಿದೆ. ತಾವು ತಮ್ಮ ತಂದೆಯನ್ನು ಒಂದು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ಅಲ್ಲಿ ಅವರು ಓಡಾಡಬಾರದು ಎಂಬ ಕಾರಣಕ್ಕೆ ಅವರ ಕೈಕಾಲು ಕಟ್ಟಿ ಹಾಕಿದ್ದರು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಪ್ರಸ್ತಾಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸಿನ ಈಶ್ವರ್ ಖಂಡ್ರೆ, ಬೀದರ್ ನಲ್ಲಿಯೂ ಇಂತಹದ್ದೇ ಪರಿಸ್ಥಿತಿಯಿದೆ. ತಾವು ಸಹ ಒಂದು 
ಆಸ್ಪತ್ರೆಯನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಹೇಳಿದರು.

ಇನ್ನು ಶಾಸಕ ಎ.ಎಸ್.ನಡಹಳ್ಳಿ ಮಾತನಾಡಿ, ರೋಗಿಗಳನ್ನು ಪರೀಕ್ಷಿಸಿ ಬೇಗನೇ ವರದಿ ನೀಡುವುದಿಲ್ಲ. ಪರೀಕ್ಷೆಗೊಳಗಾದವರು ಮನೆಗೆ ಬಂದು ಎಲ್ಲಾ ಕಡೆಗಳಲ್ಲಿಯೂ ಓಡಾಡುತ್ತಾರೆ. ಪರೀಕ್ಷಾ ಫಲಿತಾಂಶ ಬರುವವರೆಗೂ ಅವರನ್ನು ಮನೆಗೆ ಕಳುಹಿಸಬಾರದು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿ ಆಸ್ಪತ್ರೆಯ ವಿಳಂಬತೆಗೆ ಅಸಮಾಧಾನ ವ್ಯಕ್ತಪಡಿಸಿದರು. 

ಆಗ ಮಧ್ಯಪ್ರವೇಶಿಸಿದ ಸತೀಶ್ ರೆಡ್ಡಿ, ಕೊರೊನಾ ರೋಗಿ ವೆಂಟಿಲೇಟರ್ ಗೆ ಹೋದರೆ ಸ್ಥಿತಿ ಗಂಭೀರವಾಗುತ್ತದೆ. ವೆಂಟಿಲೇಟರ್ ಗೆ ಹೋದವರು ಬದುಕಿ ಉಳಿಯುವುದೇ ಕಷ್ಟ.ಬೆಂಗಳೂರಿನಲ್ಲಿ ವೆಂಟಿಲೇಟರ್ ಗೆ ಹೋದವರು ಹಿಂದಿರುಗಿ ಬಂದಿದ್ದೇ ಕಡಿಮೆ. 
ಈ ಸ್ಥಿತಿಯಲ್ಲಿ 10 ಮಂದಿಯಲ್ಲಿ 9 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಈ ಎಲ್ಲಾ ವಿಚಾರಗಳನ್ನು ಯಥಾವತ್ತಾಗಿ ಮಾಧ್ಯಮಗಳ ಮುಂದೆ ಅವರು ಬಿಚ್ಚಿಟ್ಟರು.

ಸಭೆ ಬಳಿಕ ಹೆಚ್.ಕೆ.ಪಾಟೀಲ್ ಮಾತನಾಡಿ, ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಸಂಬಂಧ ಚರ್ಚಿಸಲಾಗಿದೆ. ಕೆಲವು ಕಡೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆನ್ನುವ ಬಗ್ಗೆ ಗಮನಿಸಲಾಗಿದೆ. ಸಿಸಿಟಿವಿ ಮೂಲಕ ರೋಗಿಗಳ ಊಟ, ತಿಂಡಿ, ಚಿಕಿತ್ಸಾ ವಿಧಾನ  ಬಗ್ಗೆ ಮಾನಿಟರ್ ಮಾಡಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ಬಿಐಇಸಿ ಕೋವಿಡ್ ಕೇಂದ್ರದಲ್ಲಿ 15 ಜನಕ್ಕೆ ಒಂದರಂತೆ ಶೌಚಾಲಯ ಮಾಡಿರುವುದು ಸರಿಯಲ್ಲ. ಕೋವಿಡ್ ಸೋಂಕಿತರು ಓಡಿ 
ಹೋಗಬಾರದೆಂದು ಕೈಕಾಲು ಕಟ್ಟಿ ಹಾಕುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ. ಆದರೆ,ಇದನ್ನೆಲ್ಲ ಬಿಬಿಎಂಪಿ ಆಯುಕ್ತರು 
ಅಲ್ಲ ಗಳೆದಿದ್ದಾರೆ ಎಂದರು.

ಸಚಿವರಾದ ಡಾ.ಕೆ.ಸುಧಾಕರ್ ಆಗಲೀ ಅಥವಾ ಬೇರೆ ಯಾವುದೇ ಸಚಿವರ ಬಗ್ಗೆ ತಾವು ಮಾತನಾಡುವುದಿಲ್ಲ. ಕೋವಿಡ್ ಚಿಕಿತ್ಸಾ ಉಪಕರಣ ಖರೀದಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಹಲವಾರು ದೂರುಗಳು ಕೇಳಿಬಂದ ಆರೋಪಕ್ಕೆ ಸಂಬಂಧಿಸಿದ ಸಮಿತಿ ಪ್ರಶ್ನೆಗೆ ಇಲಾಖೆಯಿಂದ ಉತ್ತರ ಬಂದಿದೆ. ಸಿಎಜಿಯಿಂದ ವಿಶೇಷ ಆಡಿಟ್ ಆಗಬೇಕೆಂದು ಸೂಚಿಸಲಾಗಿದೆ. ವೈದ್ಯಕೀಯ ಉಪಕರಣಗಳ ಖರೀದಿ ವ್ಯವಹಾರದ ಬಗ್ಗೆ ಸ್ಪೆಷಲ್ ಆಡಿಟ್ ಮಾಡಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಗಿತ್ತು. ಸಿಎಜಿಯವರಿಂದ ಖರೀದಿ ಬಗ್ಗೆ ಸ್ಪೆಷಲ್ ಆಡಿಟ್ ಮಾಡಿಸಬೇಕೆಂಬ ನಿರ್ಣಯವನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಹೆಚ್.ಕೆ. ಪಾಟೀಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com