ಕೊರೋನಾ: ಮನೆಯವರ ವಿರೋಧ, ಮತ್ತೆ ಸೋಂಕು ತಗುಲುವ ಭೀತಿ: ಪ್ಲಾಸ್ಮಾ ದಾನ ಮಾಡಲು ಹಿಂಜರಿಯುತ್ತಿರುವ ಗುಣಮುಖರು!

ಮನೆಯವರ ವಿರೋಧ ಹಾಗೂ ಮತ್ತೆ ಸೋಂಕು ತಗುಲುವ ಭೀತಿಯಿಂದಾಗಿ ಪ್ಲಾಸ್ಮಾ ದಾನ ಮಾಡಲು ಗುಣಮುಖರಾದ ಸೋಂಕಿತರು ಹಿಂಜರಿಯುತ್ತಿರುವ ಬೆಳವಣಿಗೆಗಳು ರಾಜ್ಯದಲ್ಲಿ ಹೆಚ್ಚಾಗತೊಡಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಮನೆಯವರ ವಿರೋಧ ಹಾಗೂ ಮತ್ತೆ ಸೋಂಕು ತಗುಲುವ ಭೀತಿಯಿಂದಾಗಿ ಪ್ಲಾಸ್ಮಾ ದಾನ ಮಾಡಲು ಗುಣಮುಖರಾದ ಸೋಂಕಿತರು ಹಿಂಜರಿಯುತ್ತಿರುವ ಬೆಳವಣಿಗೆಗಳು ರಾಜ್ಯದಲ್ಲಿ ಹೆಚ್ಚಾಗತೊಡಗಿವೆ. 

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಥೆರಪಿ ಅತ್ಯುತ್ತಮ ಚಿಕಿತ್ಸೆಯಾಗಿದ್ದು, ಗುಣಮುಖರಾದ ಸೋಂಕಿತರು ಪ್ಲಾಸ್ಮಾ ದಾನ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಳ್ಳುತ್ತಿದ್ದರೂ, ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಿದ್ದರು. ಹಲವು ಗುಣಮುಖರಾದ ಸೋಂಕಿತರು ಈಗಲೂ ಮತ್ತೆ ಸೋಂಕು ತಗುಲುವ ಭೀತಿಯಿಂದಾಗಿ ಪ್ಲಾಸ್ಮಾ ದಾನ ಮಾಡಲು ಮುಂದಕ್ಕೆ ಬರುತ್ತಿಲ್ಲ. 

ಪ್ಲಾಸ್ಮಾ ದಾನ ಮಾಡಲು ವ್ಯವಸ್ಥೆಗಳನ್ನು ಕಲ್ಪಿಸಿ ಹಲವು ವಾರಗಳೇ ಕಳೆದಿವೆ. ಈ ವರೆಗೂ ಕೇವಲ 10 ಮಂದಿ ಮಾತ್ರ ಪ್ಲಾಸ್ಮಾ ದಾನ ಮಾಡಲು ಮುಂದಕ್ಕೆ ಬಂದಿದ್ದಾರೆ. ಇದರಲ್ಲಿ ಐವರು ಕೊರೋನಾ ವಾರಿಯರ್ಸ್ ಆಗಿದ್ದು, ಮೂವರು ಪೊಲೀಸರು ಹಾಗೂ ಇಬ್ಬರು ಮೈಸೂರು ಸಿಟಿ ಕಾರ್ಪೊರೇಷನ್ ನೌಕರರಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 8,467 ಕೇಸ್ ಗಳು ಪತ್ತೆಯಾಗಿದ್ದು, 4,781 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 

ಬ್ಲಡ್ ಬ್ಯಾಂಕ್'ಗೆ ಬರುವ ಸಂದರ್ಭದಲ್ಲಿ ಸೋಂಕು ತಗುಲಿದರೆ ಎಂಬ ಭೀತಿಯಿಂದಾಗಿ ಜನರು ಪ್ಲಾಸ್ಮಾ ದಾನ ಮಾಡಲು ಮುಂದಕ್ಕೆ ಬರುತ್ತಿಲ್ಲ. ಪ್ಲಾಸ್ಮಾ ದಾನ ಮಾಡುವುದು ತಮ್ಮ ಆರೋಗ್ಯಕ್ಕೆ ಉತ್ತಮವಲ್ಲ. ಪ್ಲಾಸ್ಮಾ ದಾನದ ಬಗ್ಗೆ ತಪ್ಪು ಮಾಹಿತಿ ಪಡೆದಿರಬಹುದು. ಸಾಕಷ್ಟು ಕಾರಣಗಳಿಂದ ಜನರು ಪ್ಲಾಸ್ಮಾ ದಾನ ಮಾಡಲು ಮುಂದಕ್ಕೆ ಬರುತ್ತಿಲ್ಲ. ಜನರನ್ನು ಪ್ರೋತ್ಸಾಹಿಸಲು ನಾವು ಸಾಕಷ್ಟು ಕಾರ್ಯಗಳನ್ನು ಮಾಡಲು ಪ್ರಯತ್ನಿಸುತ್ತಲೇ ಇದ್ದೇವೆ. ಮುಂದಿನ ದಿನಗಳಲ್ಲಿ ಆದರೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ ಎಂದು ಕೆ.ಆರ್. ಆಸ್ಪತ್ರೆಯ ವೈದ್ಯ ಮಂಜುನಾಥ್ ಅವರು ಹೇಳಿದ್ದಾರೆ. 

ಪ್ಲಾಸ್ಮಾ ದಾನ ಮಾಡಲು ನನಗೆ ಆಸಕ್ತಿಯಿಲ್ಲ, ಮತ್ತೆ ಆಸ್ಪತ್ರೆಗೆ ಹೋಗುವುದು ಅಲ್ಲಿಂದ ಸೋಂಕು ಮತ್ತೆ ತಗುಲುವುದು ನನಗೆ ಬೇಡ ಎಂದು ಜೆಪಿ ನಗರ ನಿವಾಸಿ ಸೋಂಕಿನಿಂದ ಗುಣಮುಖರಾಗಿರುವ ವ್ಯಕ್ತಿ ಹೇಳಿದ್ದಾರೆ. 

ಕೋವಿಡ್ ಕೇರ್ ಕೇಂದ್ರದಲ್ಲಿದ್ದಾಗ ನಮಗೆ ಉತ್ತಮವಾಗಿ ಚಿಕಿತ್ಸೆ ನೀಡಲಿಲ್ಲ. ಇದೀಗ ನಾವು ರಕ್ತ ದಾನ ಮಾಡಲಿ ಎಂದು ಹೇಗೆ ನಿರೀಕ್ಷಿಸುತ್ತಾರೆ? ಮೊದಲು ಸೋಂಕಿತರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಿ ನಂತರ ನಾವೇ ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡಲು ಮುಂದಾಗುತ್ತೇವೆಂದು ಮತ್ತೊಬ್ಬ ಸೋಂಕಿನಿಂದ ಗುಣಮುಖರಾದ ವ್ಯಕ್ತಿ ಹೇಳಿದ್ದಾರೆ. 

ರೆಮ್ಡೆಸಿವಿರ್ ಬಳಕೆಗೆ ಮಾರ್ಗಸೂಚಿ ಪ್ರಕಟ
ಈ ನಡುವೆ ನಿನ್ನೆಯಷ್ಟೇ ಆರೋಗ್ಯ ಇಲಾಖೆ ಸಭೆ ನಡೆಸಿದ್ದು, ಸಭೆಯಲ್ಲಿ ರೆಮ್ಡೆಸಿವಿರ್ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದ್ದು, ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡಲಾಗುತ್ತದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ. 

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ  ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ, ಚಿಕಿತ್ಸಾ ವಿಧಾನ, ಕೊರೋನಾ ಪರೀಕ್ಷೆ, ರೋಗಿಗಳ ದಾಖಲು ಕುರಿತು, ಬಿಡುಗಡೆ ಕುರಿತು, ತೀವ್ರ ಉಸಿರಾಟ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ಗುಣಮುಟ್ಟದ ಪಿಪಿಇ ಕಿಟ್ ಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com