ಬೆಂಗಳೂರಿನಲ್ಲಿ ನಿತ್ಯ 30 ಸಾವಿರ ಕೋವಿಡ್ ಟೆಸ್ಟ್ ನಡೆಸಲು ಬಿಬಿಎಂಪಿ ಗುರಿ!

ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಟೆಸ್ಟ್ ಪ್ರಮಾಣವನ್ನು ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಟೆಸ್ಟ್ ಪ್ರಮಾಣವನ್ನು ಹೆಚ್ಚಳ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಹೌದು.. ಬಿಬಿಎಂಪಿ ನಗರದಲ್ಲಿ ನಿತ್ಯ 30 ಸಾವಿರ ಕೋವಿಡ್ ಪರೀಕ್ಷೆಗಳನ್ನು ನಡೆಸಲು ಗುರಿ ನಿಗದಿ ಪಡಿಸಿಕೊಂಡಿದೆ. ಪ್ರಸ್ತುತ ನಗರದಲ್ಲಿ ನಿತ್ಯ 20,000 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಪರೀಕ್ಷೆ ಪ್ರಮಾಣವನ್ನು 30,000 ಹೆಚ್ಚಿಸಲು ನಿರ್ಧರಿಸಲಾಗಿದೆ.  ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಕೋವಿಡ್-19 ಪರೀಕ್ಷಾ ಪ್ರಮಾಣವನ್ನು ಹೆಚ್ಚಳ ಮಾಡುವುದರಿಂದ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಿಸುವ ಜೊತೆಗೆ ಸೋಂಕಿತರನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೆ ಸೋಂಕನ್ನು ನಿಯಂತ್ರಿಸಬಹುದು ಎಂದು ಹೇಳಿದರು.

ಸೀಲ್ ಡೌನ್ ಇಲ್ಲ
ಇದೇ ವೇಳೆ ಸೀಲ್ ಡೌನ್ ಪದ್ಧತಿ ಕೈ ಬಿಟ್ಟ ಕುರಿತ ಸ್ಪಷ್ಟನೆ ನೀಡಿದ ಮಂಜುನಾಥ್ ಪ್ರಸಾದ್ ಅವರು, 'ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಇರುವುದಿಲ್ಲ.  ಕೇವಲ 100 ಮೀಟರ್​ ಒಳಗೆ 3 ಅಥವಾ 3ಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ ಮಾತ್ರ ಕಂಟೇನ್ಮೆಂಟ್ ಜೋನ್​​ ಮಾಡಲು ನಿರ್ಧಾರ ಮಾಡಲಾಗಿದೆ. ಇಲ್ಲದಿದ್ದರೆ ಸೀಲ್​ಡೌನ್ ಮಾಡುವುದಿಲ್ಲ. ನಾಳೆಯಿಂದ ಎಲ್ಲ ಕಡೆ ಬ್ಯಾರಿಕೇಡ್ ಹಾಕುವುದು ನಿಲ್ಲುತ್ತದೆ. ಬ್ಯಾರಿಕೇಡ್, ಕಂಟೈನ್‍ಮೆಂಟ್ ಬದಲು ಪೋಸ್ಟರ್ ಅಂಟಿಸಿ ಜನರಿಗೆ ಜವಾಬ್ದಾರಿ ಮೂಡಿಸಲಾಗುತ್ತಿದೆ. ನಾವೇ ಕೋವಿಡ್-19 ವಿರುದ್ಧ ಬ್ಯಾರಿಕೇಡ್ ಹಾಕಿ ಜನರಿಗೆ ಭಯದ ವಾತಾವರಣ ಕಲ್ಪಿಸಬಾರದು. ಜೊತೆಗೆ ಈವರೆಗೂ ನಗರದಲ್ಲಿ ಕಂಟೈನ್‍ಮೆಂಟ್‍ಗಾಗಿ ವೆಚ್ಚವಾಗಿರುವ ಮಾಹಿತಿಯೂ ಪಡೆಯಲಾಗುತ್ತದೆ.

ಅಂತೆಯೇ ಪ್ರಸ್ತುತ ಇರುವ ಎಲ್ಲ ಬ್ಯಾರಿಕೇಡ್ ಗಳನ್ನು ತೆರವು ಮಾಡುವುದಿಲ್ಲ. ಅಧ್ಯಯನವನ್ನು ಆಧರಿಸಿ ಕ್ರಮೇಣ ಬ್ಯಾರಿಕೇಡ್ ತೆರವು ಮಾಡಲಾಗುತ್ತದೆ. ಕಂಟೈನ್ ಮೆಂಟ್ ಝೋನ್ ಗಳಲ್ಲಿ ಸೀಲ್ ಡೌನ್ ಮತ್ತು ಬ್ಯಾರಿಕೇಡ್ ಗಳ ಹಾಕಲು ಲಕ್ಷಾಂತರ ರೂ ಬಿಲ್ ಮಾಡಲಾಗುತ್ತಿದೆ. ಸೋಂಕು ಪೀಡಿತ ಎಂಜಿನಿಯರ್ ಒಬ್ಬರ ಮನೆಗೆ ಸೀಲ್ ಡೌನ್ ಮಾಡಲು 7 ಲಕ್ಷ ರೂ ಬಿಲ್ ಮಾಡಲಾಗಿತ್ತು, ಈ ಪ್ರಕರಣದ ಬಳಿಕ  ಗುತ್ತಿಗೆದಾರರ ಕಳ್ಳಾಟ ಬಯಲಾಗಿತ್ತು. ರಾಜರಾಜೇಶ್ವರಿ ನಗರದಲ್ಲಿ ಕಳೆದ 3 ತಿಂಗಳಲ್ಲಿ ಸೀಲ್ ಡೌನ್ ಮಾಡಲು ಬಿಬಿಎಂಪಿ ಸರಾಸರಿ 1 ರಿಂದ 1.5 ಕೋಟಿ ವೆಚ್ಚ ಮಾಡಿದೆ.  ಒಟ್ಟಾರೆ 20 ರಿಂದ 2 ಕೋಟಿ ರೂ ವೆಚ್ಚವಾಗಿದೆ. ಆದರೆ ಸೂಕ್ತ ಬಿಲ್ ಗಳನ್ನು ನೀಡದ ಹೊರತು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. 

ಖಾಸಗಿ ಆಸ್ಪತ್ರೆಗಳ ಬೇಡಿಕೆ ಕುರಿತು ಶೀಘ್ರವೇ ನಿರ್ಧಾರ
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿಗೆ ನೀಡಲಾಗಿದ್ದ ಶೇ.40ರಷ್ಟು ಬೆಡ್ ಗಳು ಖಾಲಿ ಉಳಿದಿದ್ದು, ಅದನ್ನು ಮರಳಿ ಖಾಸಗಿ ಆಸ್ಪತ್ರೆಗಳ ಅಧೀನಕ್ಕೆ ನೀಡಬೇಕು ಎಂಬ ಬೇಡಿಕೆ ಕುರಿತು ಶೀಘ್ರವೇ ಅಧಿಕಾರಿಗಳ ಸಭೆ ನಡೆದು ಈ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಅಲ್ಲಿಯವರೆಗೂ ಆ ಬೆಡ್  ಗಳನ್ನು ಕಾಯ್ದಿರಿಸಲಾಗುತ್ತದೆ. ಜನರಿಗೆ ಕೋವಿಡ್-19 ಕುರಿತು ನಿಧಾನವಾಗಿ ಮನವರಿಕೆಯಾಗುತ್ತಿದ್ದು. ಹೆಚ್ಚು ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಇದರಿಂದ ಗಂಭೀರವಾಗಿರುವ ರೋಗಿಗಳಿಗೆ ಬೆಡ್ ವ್ಯವಸ್ಥೆ ಕಲ್ಪಿಸಲು ಅವಕಾಶವಾಗುತ್ತದೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com