ಕೊಪ್ಪಳ: ಕೊವಿಡ್-19 ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವ, ಪೊಲೀಸರಿಂದ 50ಕ್ಕೂ ಹೆಚ್ಚು ಗ್ರಾಮಸ್ಥರ ಬಂಧನ

ಕೊರೋನಾ ವೈರಸ್ ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅಡ್ಡ ಪಲ್ಲಕ್ಕಿ ಉತ್ಸವ
ಅಡ್ಡ ಪಲ್ಲಕ್ಕಿ ಉತ್ಸವ

ಕೊಪ್ಪಳ: ಕೊರೋನಾ ವೈರಸ್ ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವರ ಆರಾಧನೆ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೋನಾ ವೈರಸ್ ಭೀತಿಯಿಂದ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ದೇವಸ್ಥಾನದ  ಆವರಣದಲ್ಲಿ ಮಾತ್ರ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ಸಂಬಂಧ ಸಿದ್ಧತೆ ಕೂಡ ಪೂರ್ಣಗೊಂಡಿತ್ತು. ಆದರೆ ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಆರಂಭವಾಗುತ್ತಿದಂತೆ ಏಕಾಏಕಿ ಪಲ್ಲಕ್ಕಿ ಹೊತ್ತ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದಿದ್ದಾರೆ. ಅದು ಸಾಧ್ಯವಾಗದೇ ಕೊನೆಗೆ  ದೇವಸ್ಥಾನದ ಶೆಟರ್ ಧ್ವಂಸಗೊಳಿಸಿ ಪಲ್ಲಕ್ಕಿಯನ್ನು ಹೊರ ತಂದು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಮಧ್ಯೆ ಪಲ್ಲಕ್ಕಿ ಹೊರಬರುತ್ತಿದಂತೆ ಅಲ್ಲೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ವಾಹನದ ಗಾಜು ಪುಡಿ ಪುಡಿಯಾಗಿದೆ.

ಇನ್ನು ಅಡ್ಡಪಲ್ಲಕ್ಕಿ ಉತ್ಸವಕ್ಕೆ ಕೊಪ್ಪಳ ತಹಶೀಲ್ದಾರ್ ನಿರ್ಬಂಧ ಹೇರಿದ್ದರುರೂ ಕೂಡ ಸಾವಿರಾರು ಜನಜಂಗುಳಿ ಮಧ್ಯೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡಲಾಗಿದೆ. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮಾತಿಗೂ ಜಗ್ಗದ ಜನರು ಉತ್ಸವ ನಡೆಸಲು  ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಹೀಗಾಗಿ ಒಂದು ಗಂಟೆಗಳ ಕಾಲ ಗ್ರಾಮದ ಮಧ್ಯೆ ಗ್ರಾಮಸ್ಥರು ಪಲ್ಲಕ್ಕಿ ಬಿಟ್ಟು ಓಡಿ ಹೋಗಿದ್ದರು. ಕೊನೆಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಸ್ಥಾನಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಷ್ಟಗಿ ಪೊಲೀಸ್  ಠಾಣೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕ ಮತ್ತು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಇಬ್ಬರ ದೂರಿನನ್ವಯ ಪೊಲೀಸರು ಇದೀಗ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಮತ್ತಷ್ಟು ಜನರ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಗಳನ್ನು ಗುರುತಿಸುವ ಮತ್ತು ಬಂಧಿಸುವ ಕಾರ್ಯ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಕೊಪ್ಪಳದಲ್ಲೂ ಕೂಡ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಒಂದೇ ದಿನ ರಾಜ್ಯದಲ್ಲಿ 102 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ 4,429 ಮಂದಿ ಸೋಂಕಿತರು  ಬಲಿಯಾಗಿದ್ದಾರೆ. ನಿನ್ನೆ ಒಟ್ಟಾರೆ 7,385 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,912 ಬೆಂಗಳೂರುನಲ್ಲೇ ದಾಖಲಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2,56,975ಕ್ಕೆ ಏರಿಕೆಯಾಗಿದೆ. ಬೆಂಗಳೂರು ಬಳಿಕ ಬಳ್ಳಾರಿಯಲ್ಲಿ ಅತೀ ಹೆಚ್ಚು ಅಂದರೆ 483 ಪ್ರಕರಣಗಳು  ದಾಖಲಾಗಿವೆ. ಉಳಿದಂತೆ ಉಡುಪಿಯಲ್ಲಿ 351 ಪ್ರಕರಣಗಳು, ಮೈಸೂರಿನಲ್ಲಿ 253 ಪ್ರಕರಣಗಳು, ದಾವಣಗೆರೆಯಲ್ಲಿ 245 ಪ್ರಕರಣಗಳು ಮತ್ತು ಕಲಬುರಗಿಯಲ್ಲಿ 210 ಪ್ರಕರಣಗಳು ಸೇರಿದಂತೆ ಬೆಂಗಳೂರು ಹೊರತು ಪಡಿಸಿ ರಾಜ್ಯಾದ್ಯಂತ ಒಟ್ಟು 6,231 ಪ್ರಕರಣಗಳು ದಾಖಲಾಗಿವೆ.

6,231 ಮಂದಿ ರೋಗಿಗಳು ಗುಣಮುಖ, ಬಿಡುಗಡೆ
ಇನ್ನು ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಗುಣಮುಖರ ಪ್ರಮಾಣ ಕೂಡ ಕ್ರಮೇಣ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 6,231 ಮಂದಿ ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಆ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಪೈಕಿ ಗುಣಮುಖರಾದವರ ಸಂಖ್ಯೆ  1,70,381ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ  82,149 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 30 ಜಿಲ್ಲೆಗಳಲ್ಲಿ 705 ಸೋಂಕಿತರು ಮಾತ್ರ ಐಸಿಯುನಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com