ವಕೀಲರ ಶ್ರೇಯೋಭಿವೃದ್ಧಿಗೆ ಎಲ್ಲಾ ರೀತಿಯ ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

ರಾಜ್ಯದ ವಕೀಲರ ಶ್ರೇಯೋಭಿವೃದ್ದಿಗಾಗಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯದ ವಕೀಲರ ಶ್ರೇಯೋಭಿವೃದ್ದಿಗಾಗಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಕೀಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವಕೀಲರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಹೊಸದಾಗಿ ವಕೀಲ ವೃತ್ತಿಗೆ ಬರುವವರಿಗೆ ಸರ್ಕಾರ ಒಂದು ಸಾವಿರ ರೂ ಸ್ಟೈಪೆಂಡ್ ನೀಡುತ್ತಿದ್ದು, ಇದನ್ನು ಎರಡು ಸಾವಿರ ರೂಗೆ ಏರಿಕೆ ಮಾಡಲಾಗಿದೆ. ವಕೀಲರ ಶ್ರೇಯೋಭಿವೃದ್ಧಿಗಾಗಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ 13 ಕೌಟುಂಬಿಕ ಮತ್ತು 31 ವಿಶೇಷ ನ್ಯಾಯಾಯಗಳನ್ನು ಆರಂಭಿಸಲು ಸರ್ಕಾರ ಅನುಮೋದನೆ ನೀಡಿದ್ದು, ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಒತ್ತು ನೀಡಿದೆ ಎಂದು ಯಡಿಯೂರಪ್ಪ ಹೇಳಿದರು.

ನ್ಯಾಯದಾನ ವ್ಯವಸ್ಥೆಯಲ್ಲಿ ವಕೀಲರ ವೃತ್ತಿ ಅತ್ಯಂತ ಪ್ರಮುಖವಾದದ್ದು. ದೇಶದ ಸಂವಿಧಾನದಲ್ಲಿನ ಅಂಶಗಳನ್ನುಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವಂತೆ ಮಾಡುವ ಮಹತ್ವದ ಜವಾಬ್ದಾರಿ ವಕೀಲರ ಮೇಲೆ ಇದೆ. ದೇಶದ ಸಂವಿಧಾನವನ್ನು ಉಳಿಸಿ, ಬೆಳೆಸಲು ವಕೀಲರ ಪಾತ್ರ ಅತ್ಯಂತ ಪ್ರಮುಖವಾಗಿದೆ.ಇತ್ತೀಚಿನ ದಿನಗಳಲ್ಲಿ ಪ್ರತಿಭಾವಂತ ಯುವ ಸಮೂಹ ವಕೀಲ ವೃತ್ತಿಯತ್ತ ಆಸಕ್ತರಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ ಎಂದರು

ರಾಜ್ಯದಲ್ಲಿ 1.10 ಲಕ್ಷ ವಕೀಲರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಕಷ್ಟ ಕಾರ್ಪಣ್ಯ ನಿವಾರಿಸಲು ವಕೀಲರ ಪಾತ್ರ ಅನನ್ಯ. ಜನ ಸಾಮಾನ್ಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ, ಕರ್ತವ್ಯಗಳನ್ನು ತಿಳಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ.  ವಕೀಲರು ಭೂ ವ್ಯಾಜ್ಯ, ಅಪಘಾತ, ಕಾರ್ಮಿಕ ಸಮಸ್ಯೆಗಳ ವಿಚಾರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಲಿಷ್ಟ, ನಿರ್ಭೀತ, ಜಾತಿ ರಹಿತ, ವೈವಿದ್ಯತೆಯ ಏಕತೆಯನ್ನು ಸಾರುವ ಸಮಾಜ ನಿರ್ಮಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾನೂನು ಸಚಿವ ಜೆ.ಸಿ. ಮಾಧು ಸ್ವಾಮಿ. ವಕೀಲ ಸಮೂಹ ಜನ  ಸಾಮಾನ್ಯರ ಬದುಕಯ ಹಸನುಗೊಳಿಸುವ ಕೆಲಸ ಮಾಡಬೇಕಾಗಿದೆ. ವಕೀಲರ ವೃತ್ತಿ ಸವಾಲಿನದ್ದು, ವಕೀಲರು ಬಡವರು, ನ್ಯಾಯದ ಪರವಾಗಿ ಇರಬೇಕು. ನಮ್ಮ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಬೇಕು ಎಂದರು.

ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್ ಮಾತನಾಡಿ, ವಕೀಲರ ತರಬೇತಿಗಾಗಿ ಪ್ರತ್ಯಕ ಅಕಾಡೆಮಿ ಸ್ಥಾಪಿಸಬೇಕು. ವಕೀಲರ ಕಲ್ಯಾಣ ನಿಧಿಗೆ ಬಜೆಟ್ ನಲ್ಲಿ ಹಣ ಮೀಸಲಿಡಬೇಕು. ವಕೀಲರಿಗೆ ಶಾಶ್ವತ ಕಟ್ಟಡ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯದ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಮಾತನಾಡಿ, ವಕೀಲರು ಸಂವಿಧಾನದ ಘನತೆ, ಗೌರವ ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದು, ದೇಶದ ಸಂವಿಧಾನದ ಮೌಲ್ಯಗಳು, ಆಶಯಗಳನ್ನು ಎತ್ತಿ ಹಿಡಿಯಲು ಡಾ. ಬಿ.ಆರ್. ಅಂಬೇಡ್ಕರ್, ಡಾ, ರಾಜೇಂದ್ರ ಪ್ರಸಾದ್ ಸೇರಿ ಹಲವು ಮಹನೀಯರು ಶ್ರಮಿಸಿದ್ದಾರೆ. ಈ  ಪರಂಪರೆಯನ್ನು ವಕೀಲ ಸಮೂಹ ಮುಂದುವರೆಸಬೇಕು ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಖಿಲ ಭಾರತ ವಕೀಲರ ಪರಿಷತ್ತಿನ ಅಧ್ಯಕ್ಷ ವೈ.ಆರ್. ಸದಾಶಿವ ರೆಡ್ಡಿ, ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ಎನ್. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com