ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬ್ರಿಟಿಷ್ ಕೌನ್ಸಿಲ್ ಜತೆ ಒಪ್ಪಂದಕ್ಕೆ ಅಂಕಿತ

ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕೌಶಲ್ಯ ವೃದ್ಧಿ, ವ್ಯಾಸಂಗದ ನಂತರ ಉದ್ಯೋಗಾವಕಾಶ ಹೆಚ್ಚಳ ಸೇರಿದಂತೆ ಹಲವು ಗುರಿಗಳನ್ನು ಒಳಗೊಂಡ ‘ಪರಸ್ಪರ ತಿಳಿವಳಿಕೆ ಒಪ್ಪಂದ’ (ಎಂಒಯು)ಕ್ಕೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು  ಹಾಗೂ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಗುರುವಾರ ಅಂಕಿತ ಹಾಕಿದವು.
ಬ್ರಿಟಿಷ್ ಕೌನ್ಸಿಲ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಬ್ರಿಟಿಷ್ ಕೌನ್ಸಿಲ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು:ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕೌಶಲ್ಯ ವೃದ್ಧಿ, ವ್ಯಾಸಂಗದ ನಂತರ ಉದ್ಯೋಗಾವಕಾಶ ಹೆಚ್ಚಳ ಸೇರಿದಂತೆ ಹಲವು ಗುರಿಗಳನ್ನು ಒಳಗೊಂಡ ‘ಪರಸ್ಪರ ತಿಳಿವಳಿಕೆ ಒಪ್ಪಂದ’ (ಎಂಒಯು)ಕ್ಕೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು  ಹಾಗೂ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಗುರುವಾರ ಅಂಕಿತ ಹಾಕಿದವು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಇಂಗ್ಲೆಂಡ್ ನ ವಿದೇಶಾಂಗ, ಕಾಮನ್ ವೆಲ್ತ್ ಮತ್ತು ಅಭಿವೃದ್ಧಿ ವ್ಯವಹಾರಗಳ ಸಚಿವ ಡಾಮಿನಿಕ್ ರಾಬ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಒಪ್ಪಂದವೇರ್ಪಟ್ಟಿತು. 

ಮೂರು ವರ್ಷಗಳ ಅವಧಿಯ ಈ ಒಪ್ಪಂದಕ್ಕೆ ರಾಜ್ಯ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ ಮತ್ತು ಬ್ರಿಟಿಷ್ ಕೌನ್ಸಿಲ್ (ಇಂಡಿಯಾ) ಮುಖ್ಯಸ್ಥರಾದ ವಿಕ್ ಹ್ಯಾಮ್ ಒ.ಬಿ.ಟಿ. ಸಹಿ ಹಾಕಿದರು.

ನಂತರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ,  ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ತರಬೇತಿ, ಬೋಧಕ ವೃಂದದವರಿಗೆ ನಾಯಕತ್ವ ತರಬೇತಿ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಈ ಒಪ್ಪಂದದ ಉದ್ದೇಶವಾಗಿದೆ ಎಂದರು.

ಕರ್ನಾಟಕ ಹಾಗೂ ಸಂಯುಕ್ತ ಸಂಸ್ಥಾನದ (ಯುಕೆ) ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದದ ವಿನಿಯಮಕ್ಕೆ ಕೂಡ ಈ ಒಪ್ಪಂದ ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯು ಇಲ್ಲಿನ ವಿದ್ಯಾರ್ಥಿಗಳ ಇಂಗ್ಲಿಷ್  ಭಾಷಾ ನೈಪುಣ್ಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ. ಇದು ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ಆಶಯಗಳನ್ನು ಕಾರ್ಯರೂಪಕ್ಕಿಳಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಉನ್ನತ ಶಿಕ್ಷಣವು ಬಹುಶಿಸ್ತೀಯ ಅಧ್ಯಯನವಾಗಲಿದೆ. ಅಂದರೆ ಈಗಿರುವಂತೆ ಕೋರ್ಸ್‌ಗಳ ಸಂಯೋಜನೆಯಲ್ಲಿ ವಿಷಯಗಳ ಕಟ್ಟುಪಾಡು ಇರುವುದಿಲ್ಲ. ವಿದ್ಯಾರ್ಥಿಗಳು ತಮಗೆ ಇಷ್ಟವಾದ ವಿಷಯಗಳನ್ನು ಆಯ್ದುಕೊಳ್ಳಬಹುದು. ಜೊತೆಗೆ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯಕ್ಕೆ ತಕ್ಕಂತೆ ಕನಿಷ್ಠ 4 ವಿಷಯಗಳಿಂದ ಹಿಡಿದು ಗರಿಷ್ಠ ಎಷ್ಟು ಸಾಧ್ಯವೋ ಅಷ್ಟು ವಿಷಯಗಳನ್ನು ಅಭ್ಯಾಸ ಮಾಡಬಹುದು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ಸ್ವರೂಪವೇ ಬದಲಾಗಲಿದೆ. ಹೀಗಾಗಿ, ಬ್ರಿಟಿಷ್ ಕೌನ್ಸಿಲ್ ನೊಂದಿಗಿನ ಸಹಭಾಗಿತ್ವ ಪರಸ್ಪರ ಎರಡೂ ದೇಶಗಳಿಗೆ ಅನುಕೂಲಕರವಾಗಲಿದೆ. ಇಂತಹ ಸಹಭಾಗಿತ್ವಗಳು ಇನ್ನಷ್ಟು ಹೆಚ್ಚಾಗುವ ಅಗತ್ಯವಿದೆ ಎಂದರು.

ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ಕ್ರಮೇಣ ಸ್ವಾಯತ್ತ ಸಂಸ್ಥೆಯಾಗಬೇಕು ಹಾಗೂ ಸಮಾಜವು ಜ್ಞಾನಕೇಂದ್ರಿತ ಸಮಾಜ ಆಗಬೇಕೆಂಬುದು ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ಆಶಯ. ಇದಕ್ಕೆ ಪೂರಕವಾಗಿ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ಹಾಗೂ ಸಂಯುಕ್ತ ಸಂಸ್ಥಾನದ (ಯು,ಕೆ.) ಶಿಕ್ಷಣ ಸಂಸ್ಥೆಗಳ ನಡುವೆ ಕೊಡುಕೊಳ್ಳುವಿಕೆಗೆ ಈ ಒಪ್ಪಂದ ಅನುವು ಮಾಡಿಕೊಡಲಿದೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಬ್ರಿಟಿಷ್ ಕೌನ್ಸಿಲ್ ನ ಭಾರತೀಯ ವಿಭಾಗದ ನಿರ್ದೇಶಕಿ ಬಾರ್ಬರಾ ವಿಕ್ ಹ್ಯಾಮ್ ಒ,ಬಿ.ಇ.  ಮಾತನಾಡಿ, ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯದೊಂದಿಗೆ ಭಾಗಿಯಾಗುವುದಕ್ಕೆ ಉತ್ಸುಕತೆಯಿಂದ ಎದುರು ನೋಡುತ್ತಿರುವುದಾಗಿ ಹೇಳಿದರು.

ಬ್ರಿಟಿಷ್ ಕೌನ್ಸಿಲ್ ದಕ್ಷಿಣ ಭಾರತ ನಿರ್ದೇಶಕರಾದ ಜನಕ ಪುಷ್ಪನಾಥನ್ ಮಾತನಾಡಿ, ಬೆಂಗಳೂರು ನಗರವು ಪ್ರಮುಖ ಕಂಪನಿಗಳ ಸಂಶೋಧನಾ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕೇಂದ್ರಗಳಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆ (ಇಂಟರ್ ನ್ಯಾಷನಲ್ ಸ್ಕೂಲ್)ಗಳಿರುವ ನಗರವಾಗಿದೆ. ಹೀಗಾಗಿ ಈ ಒಪ್ಪಂದವು ಪರಸ್ಪರ ಎರಡೂ ದೇಶಗಳ ನಡುವೆ ಜ್ಞಾನ ವಿನಿಮಯ, ಬೋಧಕರ ಸಾಮರ್ಥ್ಯ ವೃದ್ಧಿ, ಸಾಮಾಜಿಕ ಸಂಪರ್ಕಗಳು ಹಾಗೂ ಶೈಕ್ಷಣಿಕ ಸಂಶೋಧನೆಗೆ ಸಹಕಾರಿಯಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com