ಸುಪ್ರೀಂಕೋರ್ಟ್ ಬಡ್ತಿಯನ್ನು ತೆಗೆದುಹಾಕಿಲ್ಲ: ಸಿದ್ದರಾಮಯ್ಯ

ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಷ್ಟೇ ಹೇಳಿದೆ, ಬಡ್ತಿಯನ್ನು ತೆಗೆದುಹಾಕಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಕಲಬುರಗಿ: ಸುಪ್ರೀಂಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಷ್ಟೇ ಹೇಳಿದೆ, ಬಡ್ತಿಯನ್ನು ತೆಗೆದುಹಾಕಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಚಾರ. ಸರ್ಕಾರಿ ಉದ್ಯೋಗದಲ್ಲಿ ಮೀಸಲು ಬೇಕೇಬೇಕು ಎಂದು ಕೇಳುವುದಕ್ಕೆ ಅದು ಯಾವುದೇ ಮೂಲಭೂತ ಹಕ್ಕು ಇಲ್ಲ. ಮೀಸಲು ನೀಡುವಂತೆ ಸರ್ಕಾರಗಳಿಗೆ ಆದೇಶಿಸುವ ಅಧಿಕಾರ ನ್ಯಾಯಾಲಯಗಳಿಗೂ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 

ಸರ್ವೋಚ್ಛ ನ್ಯಾಯಾಲಯದ ಈ ತೀರ್ಪು ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೂ ಮೂನ್ನ ತೀರ್ಪಿನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕಿದೆ. ದಿನಪತ್ರಿಕೆಗಳ ವರದಿಗಳಲ್ಲಿ ಬಂದ ಸುದ್ದಿಯಿಂದ ಮಾಹಿತಿ ತಿಳಿದುಕೊಂಡಿದ್ದೇನೆ. ತೀರ್ಪನ್ನು ಸ್ವತಃ ಓದಿದ ಬಳಿಕವಷ್ಟೇ ಈ ಬಗ್ಗೆ ಸಂಪೂರ್ಣವಾಗಿ ಹೇಳಿಕೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ. 

ಇದೇ ವೇಳೆ ಕೇಂದ್ರ ಬಜೆಟ್ ಕುರಿತಂತೆ ಮಾತನಾಡಿದ ಅವರು, ಸಾಕಷ್ಟು ಇಲಾಖೆಗಳಿಗೆ ಅಗತ್ಯವಿರುವ ನಿಧಿಯನ್ನು ನೀಡಲಾಗಿಲ್ಲ. ಮನ್ರೇಗಾ ಯೋಜನೆ ಅಡಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇಂತಹ ನಿರ್ಧಾರಗಳಿಂದ ದೇಶ ಅಭಿವೃದ್ಧಿಗೊಳ್ಳುವುದಾದರೂ ಹೇಗೆ? ಬೆಂಗಳೂರು ನಗರಕ್ಕೆ ಸಬೂರ್ಬನ್ ರೈಲನ್ನು ನೀಡಲಾಗುತ್ತಿದೆ. ಇದು ಅತ್ಯಲ್ಪವಾಗಿದೆ. ಕರ್ನಾಟಕ ಕಲ್ಯಾಣಕ್ಕಾಗಿ ಯಾವುದೇ ಹೊಸ ಯೋಜನೆಗಳನ್ನೂ ಘೋಷಣೆ ಮಾಡಿಲ್ಲ. ಕಲಬುರಗಿ ರೈಲ್ವೇ ವಿಭಾಗದ ಬಗ್ಗೆ ಯಾವುದೇ ಮಾತುಗಳೂ ಬರಲಿಲ್ಲ ಎಂದು ತಿಳಿಸಿದ್ದಾರೆ. 

ಮುಂಬರುವ ತಿಂಗಳಿನಲ್ಲಿ ರಾಜ್ಯ ಬಜೆಟ್ ಮೇಲೆ ಕೇಂದ್ರದ ಬಜೆಟ್ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿತ ಅವರು, ಪರಿಣಾಮ ಬೀರುವ ಸಾಧ್ಯತೆಗಳಿವೆ. ಪರಿಸ್ಥಿತಿಯನ್ನು ಯಡಿಯೂರಪ್ಪ ಸರ್ಕಾರ ಹೇಗೆ ನಿಭಾಯಿಸುತ್ತದೆ ಮತ್ತು ಎಲ್ಲಾ ಇಲಾಖೆಗಳಿಗೆ, ಬಡವರಿಗೆ ಹಾಗೂ ಎಲ್ಲಾ ವಲಯಗಳಿಗೆ ಹೇಗೆ ನ್ಯಾಯ ದೊರಕಿಸಿಕೊಡಲಿದೆ ಎಂಬುದನ್ನು ನೋಡಬೇಕಿದೆ ಎಂದಿದ್ದಾರೆ. 

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಳಂಬ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಯಕರ ಕುರಿತ ವಿಚಾರಗಳ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸುತ್ತಿದೆ. ಶೀಘ್ರದಲ್ಲಿಯೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ಸಂಪುಟ ವಿಸ್ತರಣೆ, ಪುನಾರಚನೆ, ಖಾತೆ ಹಂಚಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಯಡಿಯೂರಪ್ಪ ಅವರ ವಿರುದ್ಧವೂ ಇದೇ ವೇಳೆ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. 

ಯಡಿಯೂರಪ್ಪ ಅವರ ಪರಿಸ್ಥಿತಿಯನ್ನು ನಾನು ಹೇಳಲು ಸಾಧ್ಯವಿಲ್ಲ. ಇದು ಅವರ ಅಸಾಮರ್ಥ್ಯವೋ ಏನೋ ಎಂಬುದು ನನಗೆ ಗೊತ್ತಿಲ್ಲ. ಯಡಿಯೂರಪ್ಪ ಅವರು ಪ್ರತಿಯೊಂದಕ್ಕೂ ಹೈಕಮಾಂಡ್ ಎಂದು ಹೇಳುತ್ತಾರೆ. ಸಚಿವ ಸಂಪುಟ ವಿಸ್ತರಣೆಯೊಂದೇ ಅಲ್ಲದೇ ಖಾತೆ ಹಂಚಿಕೆಗೂ ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com