'ಎಲಿವೇಟೆಡ್ ಕಾರಿಡಾರ್' ಖಜಾನೆ ಕದಿಯುವ ಗುಮ್ಮ: ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಎಲಿವೇಟೆಡ್ ಕಾರಿಡಾರ್ ಜಾರಿಗೆ ತರಲು ತವಕಿಸುತ್ತಿರುವ ಬಿಜೆಪಿ ಸಚಿವರು ಹಾಗೂ ಶಾಸಕರ ನಡೆಯನ್ನು ವಿರೋಧಿಸಿ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿ ಮಾಡದಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

Published: 26th February 2020 03:15 PM  |   Last Updated: 26th February 2020 03:15 PM   |  A+A-


aap-1

ಎಎಪಿ ಪ್ರತಿಭಟನೆ

Posted By : Lingaraj Badiger
Source : UNI

ಬೆಂಗಳೂರು: ಎಲಿವೇಟೆಡ್ ಕಾರಿಡಾರ್ ಜಾರಿಗೆ ತರಲು ತವಕಿಸುತ್ತಿರುವ ಬಿಜೆಪಿ ಸಚಿವರು ಹಾಗೂ ಶಾಸಕರ ನಡೆಯನ್ನು ವಿರೋಧಿಸಿ, ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿ ಮಾಡದಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಟೌನ್ ಹಾಲ್ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಸರ್ಕಾರಗಳು ನೂತನವಾಗಿ ರಚನೆಯಾದಾಗಲೆಲ್ಲ ಅಥವಾ ಪ್ರತಿವರ್ಷ ಬಜೆಟ್ ಮಂಡನೆಯಾಗುವ ಹೊಸ್ತಿಲಿನಲ್ಲಿ ಎಲಿವೇಟೆಡ್ ಕಾರಿಡಾರ್ ಅಥವಾ ಎತ್ತರಿಸಿದ ಮಾರ್ಗ ಎಂಬ ಗುಮ್ಮ ಧುತ್ತನೆ ವಿಧಾನಸಭೆಯ ಪಡಸಾಲೆಗಳಲ್ಲಿ, ಮಂತ್ರಿಮಹೋದಯರು ಹಾಗೂ ಅಧಿಕಾರಿಗಳ ಸಮ್ಮುಖ ಸಭೆಗಳಲ್ಲಿ ಪ್ರತ್ಯಕ್ಷವಾಗಿ ಸಾವಿರಾರು ಕೋಟಿ ರೂ.ಗಳ ಅನುದಾನವೆಂಬ ಮಹಾ ಮೋಸಕ್ಕೆ ಇಂಬು ನೀಡುತ್ತಿದೆ ಎಂದು ಅರೋಪಿಸಿದರು.

ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಜನತೆ ಸಂಚಾರ ಸಮಸ್ಯೆಗಳಿಂದ ಇಕ್ಕಟ್ಟಿಗೆ ಸಿಲುಕಿ ಪಡಬಾರದ ಪಡಿಪಾಟಲು ಬೀಳುತ್ತಿರುವ ಈ ಜ್ವಲಂತ ಸಮಸ್ಯೆಯನ್ನು ಅಧಿಕಾರಸ್ಥರು ಸರ್ಕಾರದ ಖಜಾನೆ ಕೊಳ್ಳೆಹೊಡೆಯುವ ಮಾರ್ಗವನ್ನಾಗಿ ಬಳಸಿಕೊಳ್ಳುತ್ತಿರುವುದು ತೀರಾ ಅಸಹ್ಯ ಎನಿಸುತ್ತದೆ ಎಂದು ಕಿಡಿಕಾರಿದರು.

ಬೆಂಗಳೂರಿಗರ ನೈಜ ಸಂಚಾರ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು ಕಳೆದ ಹಲವಾರು ವರ್ಷಗಳಿಂದ ಅನೇಕಾನೇಕ ಮೆಟ್ರೋ ಯೋಜನೆಗಳು, ಫ್ಲೈ ಓವರ್‌ಗಳು, ಅಂಡರ್ ಪಾಸ್‌ಗಳು, ರಸ್ತೆ ಅಗಲೀಕರಣಗಳು, ಪಾದಚಾರಿ ರಸ್ತೆ ಅಭಿವೃದ್ಧಿ, ವೈಟ್ ಟ್ಯಾಪಿಂಗ್, ಬ್ಲ್ಯಾಕ್  ಟ್ಯಾಪಿಂಗ್, ಬಿ ಟ್ರಾಕ್ ನಾಮಪಲಕಗಳು, ಜಾಹೀರಾತು ಫಲಕಗಳಂತಹ ಮತ್ತಿತರ ನವನವೀನ ಸುಧಾರಣೆಗಳನ್ನು ಜಾರಿಗೆ ತಂದರೂ ಸಹ ಯಾವುದೇ ಸಮಸ್ಯೆಗಳನ್ನು ಬಗಹರಿಸಲು ಸಾಧ್ಯವಾಗಿಲ್ಲ. ಬದಲಾಗಿ ಮತ್ತಷ್ಟು ಟ್ರಾಫಿಕ್ ಸಮಸ್ಯೆಗಳು  ಬೃಹದಾಕಾರವಾಗಿ ತಲೆ ಎತ್ತುತ್ತಿರುವುದು ಆಳುವ ಸರ್ಕಾರಗಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಇಲ್ಲದಿರುವುದು ಸ್ಪಷ್ಟವಾಗಿ ಸಾಬೀತಾಗುತ್ತಿದೆ ಎಂದು ಅವರು ದೂರಿದರು.

ಈ ಎಲ್ಲಾ ಯೋಜನೆಗಳು ಬೆಂಗಳೂರಿಗರ ಮೂಲಭೂತ ಸೌಕರ್ಯಗಳ ಅಡಿಯಲ್ಲಿ ಬಂದರೂ ಬೆಂಗಳೂರಿಗರಿಗೆ ಯಾವುದೇ ಮೂಲಭೂತ ಸೌಕರ್ಯಗಳ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಈ  ಯೋಜನೆಗಳೆಲ್ಲ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಮಿಷನ್ ದಂಧೆಗೆ ಮತ್ತಷ್ಟು ಇಂಬು ನೀಡುತ್ತಿದೆಯೇ ಹೊರತು ಮತ್ತಿನ್ಯಾವ ಮಹಾನ್ ಸಾಧನೆಯೂ ಆಗಿಲ್ಲ ಎಂದು ಅವರು ಆರೋಪಿಸಿದರು.

ಹೀಗಿರುವಾಗ ಮತ್ತೊಮ್ಮೆ ಎಲಿವೇಟೆಡ್ ಕಾರಿಡಾರ್ ಎಂಬ ಗುಮ್ಮನಿಗಾಗಿ 26,000 ಕೋಟಿ ವೆಚ್ಚವಾಗುತ್ತದೆ. ಅದಕ್ಕೆ 9,300 ಕೋಟಿ ರೂಗಳು ಪ್ರಥಮ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ಗಾಗಿ ಮೀಸಲು ನೀಡಬೇಕೆಂದು ಬೆಂಗಳೂರಿನ ಮಂತ್ರಿಮಹೋದಯರು ಹಾಗೂ ಶಾಸಕರು ಕಳೆದ ವಾರ ನಡೆಸಿದ ಸಭೆಯಲ್ಲಿ ಕೋರಲಾಗಿದೆ. ಈಗಾಗಲೇ ನಗರ ಯೋಜನಾ ತಜ್ಞರು, ಸಂಚಾರ ವಿಜ್ಞಾನಿಗಳು, ನಾಗರಿಕ ಸಂಘಗಳು ಹಾಗೂ ಬೆಂಗಳೂರಿನ ಸಮಸ್ತ ಜನತೆ ಇದನ್ನು ವಿರೋಧಿಸಿದರೂ ಸಹ ಮತ್ತೊಮ್ಮೆ ಬಜೆಟ್‌ನಲ್ಲಿ ಬೇಡಿಕೆ ಇಟ್ಟಿರುವುದು ನಿಜಕ್ಕೂ ಖೇದವೆನಿಸುತ್ತದೆ ಎಂದು ದಾಸರಿ ಹೇಳಿದರು.

ಬೆಂಗಳೂರಿಗರ ಟ್ರಾಫಿಕ್ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಬಹು ವರ್ಷಗಳ ಕನಸಾದ ಸಬ್ ಅರ್ಬನ್ ರೈಲ್ವೆ ನಿರ್ಮಾಣಕ್ಕಾಗಿ ಕೇಂದ್ರ ಮೀಸಲಿಟ್ಟಿರುವುದು ಕೇವಲ ಒಂದು ಕೋಟಿ. ಕೇಂದ್ರ ಸರ್ಕಾರದ ಈ ಮಹಾ ಮೋಸವನ್ನು ವಿರೋಧಿಸದ ಬೆಂಗಳೂರಿನ ಮಂತ್ರಿಗಳು, ಶಾಸಕರು ಎಲಿವೇಟೆಡ್ ಕಾರಿಡಾರ್ ಯೋಜನೆಗಾಗಿ ಮೀಸಲಿಡಲು ಕೇಳುತ್ತಿರುವುದು 9,300 ಕೋಟಿ ರೂಗಳು. ಆಗಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸಬರ್ಬನ್ ರೈಲು, ಬಿಎಂಟಿಸಿ ಬಸ್ಸುಗಳ ಸುಧಾರಣೆ, ಶೇರ್ ಆಟೋಗಳು, ಬಸ್ ಪಥಗಳಂತಹ ಸಮೂಹ ಸಾರಿಗೆಗಳನ್ನು ಉತ್ತೇಜಿಸುವಂತಹ ವೈಜ್ಞಾನಿಕ ಹಾಗೂ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಬೆಂಗಳೂರಿನ ಯಾವೊಬ್ಬ ಶಾಸಕರುಗಳಿಗೂ  ಮನಸ್ಸಿಲ್ಲದೆ  ಇರುವುದು ನಿಜಕ್ಕೂ ದುರಂತ ಎಂದು ಅವರು ಹೇಳಿದರು.

ಮುಂಬರುವ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಸಬರ್ಬನ್ ರೈಲ್ವೆ ಯೋಜನೆಗಾಗಿ ತನ್ನ ಪಾಲಿನ ಶೇಕಡ 20ರಷ್ಟು ಹಣವನ್ನು ಬಿಡುಗಡೆ ಮಾಡಿ ಈ ಕೂಡಲೇ ಕೆಲಸವನ್ನು ಪ್ರಾರಂಭಿಸಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತದೆ ಎಂದು ತಿಳಿಸಿದರು.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp