ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಡಿಜಿಟಲ್ ಗ್ರಂಥಾಲಯ ಆ್ಯಪ್ ಲೋಕಾರ್ಪಣೆ

ದೇಶದಲ್ಲೇ ಮೊತ್ತಮೊದಲ ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಆಪ್‍ ಸೇವೆಯನ್ನು ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಸಮರ್ಪಣೆ ಮಾಡಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್

ಬೆಂಗಳೂರು: ದೇಶದಲ್ಲೇ ಮೊತ್ತಮೊದಲ ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಆಪ್‍ ಸೇವೆಯನ್ನು ಇಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಸಮರ್ಪಣೆ ಮಾಡಿದ್ದಾರೆ.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಶ್ರಯದಲ್ಲಿ ಬುಧವಾರ ಹಂಪಿನಗರದ ನಗರ ಕೇಂದ್ರ ಗ್ರಂಥಾಲಯಯದ ಗ್ರಂಥಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಡಿಜಿಟಲ್ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಆಪ್‍ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್. ಸುರೇಶ್ ಕುಮಾರ್, ತಂತ್ರಜ್ಞಾನ ಸೌಲಭ್ಯದೊಂದಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಡಿಜಿಟಲೀಕರಣಗೊಳಿಸುವ, ಇಡೀ ದೇಶದಲ್ಲಿ ಮೊಟ್ಟಮೊದಲನೆಯ ಯೋಜನೆ ಇದಾಗಿದ್ದು, ಸಾರ್ವಜನಿಕರು ಹಾಗೂ ಓದುಗಕೋಟಿಯನ್ನು ವಿಶಿಷ್ಟವಾದ ಕಲಿಕಾ ಆಯಾಮಕ್ಕೆ ತೊಡಗಿಸುವ ಸರ್ಕಾರಿ ಪ್ರೇರಿತ ಬೃಹತ್ ಅಭಿಯಾನ ಇದಾಗಿದೆ ಎಂದರು.
 
ಸುಮಾರು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯವಿರುವ ಹಕ್ಕುಸ್ವಾಮ್ಯ ಹೊಂದಿರುವ ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಇನ್ನು ಮುಂದೆ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿಯೇ ‘ಸಾರ್ವಜನಿಕ ಇ-ಗ್ರಂಥಾಲಯ ಆಪ್’ ಮೂಲಕವೇ ಓದಬಹುದಾಗಿದೆ. ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಈಗಾಗಲೇ ಆಪ್‍ನಲ್ಲಿ ವೆಬ್‍ಸೈಟ್‍ನಲ್ಲಿ ಡಿಜಿಟಲೀಕರಣಗೊಳಿಸಿ ಅಡಕಗೊಳಿಸಲಾಗಿದೆ. ನಿಯತಕಾಲಿಕೆಗಳು, ಭಾಷಾ ಪುಸ್ತಕಗಳು, ವಿಡಿಯೋಗಳು. ಹೀಗೆ ಎಲ್ಲವೂ ಇದೇ ಪ್ಲಾಟ್‍ಫಾರಂನಲ್ಲಿ ದೊರೆಯಲಿವೆ ಎಂದು ಸಚಿವರು ಹೇಳಿದರು. ಗ್ರಂಥಾಲಯವನ್ನು ಓದುಗರ ಮನೆ ಬಾಗಿಲಿಗೆ, ಅವರ ಬೆರಳ ತುದಿಗೆ ತಂದುಕೊಳ್ಳುವ ಒಂದು ವ್ಯವಸ್ಥೆ ಇದಾಗಿದ್ದು, ಈ ಮೂಲಕ 6 ಕೋಟಿ ಗ್ರಂಥಾಲಯಗಳೇ ಸ್ಥಾಪನೆಯಾದಂತಾಗಿದೆ ಎಂಬ ಭಾವನೆ ಮೂಡುವಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಇದು ಒಂದು ಸಾಂಸ್ಕೃತಿಕ ಪಲ್ಲಟ ಎನ್ನಬಹುದಾಗಿದೆ. ಸುಮಾರು 95,000 ಇಂಗ್ಲಿಷ್ ಪುಸ್ತಕಗಳು ಇಲ್ಲಿವೆ. ಲೇಖಕರು, ಪ್ರಕಾಶಕರು ಈ ಸಾಂಸ್ಕೃತಿಕ ಪಲ್ಲಟಕ್ಕೆ ತಮ್ಮನ್ನು ತಾವು ಹೆಚ್ಚೆಚ್ಚು ಮುಕ್ತವಾಗಿ ತೆರೆದುಕೊಳ್ಳಬೇಕಾದ ಕಾಲ ಇದಾಗಿದೆ ಎಂದು ಸಚಿವರು ಹೇಳಿದರು. ಹಾಗೆಂದ ಮಾತ್ರಕ್ಕೆ ನಮ್ಮ ಲೇಖಕರು, ಪ್ರಕಾಶಕರ ಹಿತಕ್ಕೆ ವಿರುದ್ಧವಾದ ಯಾವ ನಿರ್ಣಯವನ್ನು ನಾನು ತೆಗೆದುಕೊಳ್ಳುತ್ತೇನೆಂಬ ಭಾವನೆ ಬೇಡ. ಈ ಮಾತನ್ನು ನಾನು ವಿಶ್ವಾಸ ಮತ್ತು ಧೈರ್ಯದಿಂದ ತಿಳಿಸಲು ಇಚ್ಛಿಸುತ್ತೇನೆ. ಡಿಜಿಟಲೀಕರಣದ ಮೂಲಕ ನಾವು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕಿದೆ. ಕಿಂಡಲ್‍ನಂತಹ ತಾಂತ್ರಿಕ ಆವಿಷ್ಕಾರಗಳ ಮೂಲಕ ಪುಸ್ತಕ ಓದಬಹುದಾಗಿದೆ. ಕನ್ನಡದ ಪುಸ್ತಕಗಳೂ ಸಹ ಕಿಂಡಲ್‍ನಲ್ಲಿ ದೊರೆಯುತ್ತವೆ. ಆದರೆ ವೈಯಕ್ತಿಕವಾಗಿ ನನಗೆ ಕಿಂಡಲ್‍ನಂತಹ ವ್ಯವಸ್ಥೆ ಕುರಿತು ಒಲವಿಲ್ಲ. ಆದರೆ ಜನರ ಒಲವನ್ನು ಮತ್ತು ಅಭಿಪ್ರಾಯವನ್ನು ನಾವು ಗೌರವಿಸಬೇಕಾಗುತ್ತದೆ ಎಂದೂ ಸಚಿವರು ಹೇಳಿದರು.

ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಮ್ಮ ಸರ್ಕಾರದ ನಿಲುವು ಮುಂದೆಯೂ ಮುಂದುವರೆಯುತ್ತದೆ. ಜನರು ಆಕರ್ಷಣೆಗೊಳ್ಳುವ ಮಾಧ್ಯಮದಲ್ಲಿಯೇ ನಾವು ಅವರನ್ನು ಓದಿನ ಕಡೆಗೆ ಪ್ರೇರೇಪಿಸಬೇಕಾಗುತ್ತದೆ. ಇದು ಸಾರ್ವಜನಿಕ ಜವಾಬ್ದಾರಿಯೂ ಆಗಿದೆ ಎಂಬುದನ್ನು ನಾವು ಮರೆಯುವಂತಿಲ್ಲ ಎಂದರು. ಹಾಗಾಗಿ ಎಲ್ಲ ಲೇಖಕರು, ಪ್ರಕಾಶಕರು ಇದರ ಬಗ್ಗೆ ಮುಕ್ತ ನಿಲುವು ಹೊಂದುವಂತಾಗಲಿ. ಆ ಮೂಲಕ ನಾವೆಲ್ಲ ಕೂಡಿ ಸಾರ್ವಜನಿಕರನ್ನು ಓದಿನ ಕಡೆಗೆ ಪ್ರೇರೇಪಿಸಲು ಮುಂದಾಗೋಣ ಎಂದೂ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. 

ನಾನು ವಿದ್ಯಾರ್ಥಿ ದೆಸೆಯಿಂದಲೂ ಒಂದು ರೀತಿಯಲ್ಲಿ ಪುಸ್ತಕದ ಹುಳುವೇ ಹೌದು. ಮಲ್ಲೇಶ್ವರಂ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಅಲ್ಲಿನ ಸಿಟಿ ಸೆಂಟ್ರಲ್ ಲೈಬ್ರರಿಯೇ ನನಗೆ ಮನೆಯಾಗಿತ್ತು. ಶಾಲೆ ಬಿಟ್ಟರೇ ಆ ಗ್ರಂಥಾಲಯದಲ್ಲಿ ನನ್ನ ಲಭ್ಯತೆ ಎಂಬುದು ನನ್ನ ಸಹಪಾಠಿಗಳ ಮತ್ತು ಉಪಾಧ್ಯಾಯರಿಗೆಲ್ಲ ಗೊತ್ತಾಗುವಷ್ಟು ಮಟ್ಟಿಗೆ ಅದರೊಂದಿಗೆ ಅವಿನಾಭಾವ ಸಂಬಂಧವಿತ್ತು ಎಂದರು. ಈಗಲೂ ನನ್ನ ಮನೆಯ ಒಂದು ಕೊಠಡಿಯೇ ಗ್ರಂಥಾಲಯವಾಗಿದ್ದು, 3500ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ, ಮುಂದೆ ಈ ಪುಸ್ತಕಗಳನ್ನು ಯಾವುದಾದರೂ ಶಾಲೆ ಇಲ್ಲವೇ ಗ್ರಂಥಾಲಯಕ್ಕೆ ನೀಡುವ ಇರಾದೆ ಇದೆ ಎಂದು ಸಚಿವರು ತಮ್ಮ ಓದುವ ಹವ್ಯಾಸವನ್ನು ಬಿಚ್ಚಿಟ್ಟರು. 

ಗ್ರಂಥಾಲಯ ಪಿತಾಮಹ ಶ್ರೀ ರಂಗನಾಥ್ ಅವರನ್ನು ಸ್ಮರಿಸಿದ ಸಚಿವರು, ಯಾವುದೇ ಇಲಾಖೆಯು ತಮ್ಮ ಸಂಸ್ಥಾಪಕರನ್ನು ಇಷ್ಟೊಂದು ಮಟ್ಟಿಗೆ ಸ್ಮರಿಸಿಕೊಂಡ ನಿದರ್ಶನಗಳೇ ಇಲ್ಲ. ಪ್ರತಿ ಗ್ರಂಥಾಲಯದಲ್ಲೂ ರಂಗನಾಥ್ ಅವರ ಭಾವಚಿತ್ರಗಳಿವೆ, ಪ್ರತಿ ವರ್ಷವೂ ಗ್ರಂಥಾಲಯ ಸಪ್ತಾಹ ಆಚರಿಸುವುದಲ್ಲದೇ ತಮ್ಮ ಸಂಸ್ಥಾಪಕರ ಸ್ಮರಣೆ ಮಾಡುವುದು ಗ್ರಂಥಾಲಯ ಇಲಾಖೆಯ ವಿಶೇಷತೆಯೇ ಹೌದು ಎಂದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಮತ್ತಿತರರು ಭಾಗವಹಿಸಿದ್ದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಸ್ವಾಗತಿಸಿ, ಇಲಾಖೆಯ ಕಾರ್ಯವೈಖರಿ, ಡಿಜಿಟಲೀಕರಣ, ಗ್ರಂಥಾಲಯ ಆಪ್ ಕುರಿತು ವಿವರಣೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com