ಅನ್ನಭಾಗ್ಯ: 7 ಕೆ.ಜಿ ಬದಲು 5 ಕೆ.ಜಿ ಅಕ್ಕಿ, ಮತ್ತಷ್ಟು ಧಾನ್ಯ ಸೇರ್ಪಡೆಗೆ ಸರ್ಕಾರ ಚಿಂತನೆ

ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅನ್ನಭಾಗ್ಯದ ಅಕ್ಕಿಯನ್ನು 7 ಕೆ.ಜಿ ಬದಲು 5 ಕೆ.ಜಿಗೆ ಇಳಿಸಿ, ಮತ್ತಷ್ಟು ಧಾನ್ಯಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅನ್ನಭಾಗ್ಯದ ಅಕ್ಕಿಯನ್ನು 7 ಕೆ.ಜಿ ಬದಲು 5 ಕೆ.ಜಿಗೆ ಇಳಿಸಿ, ಮತ್ತಷ್ಟು ಧಾನ್ಯಗಳನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ಅನ್ನಭಾಗ್ಯ ಯೋಜನೆಯನ್ನು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದರು. ಯೋಜನೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ 7 ಕೆಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಇದರಿಂದ ರಾಜ್ಯದ 1.22 ಕೋಟಿ ಕುಟುಂಬ ಹಾಗೂ 4.27 ಕೋಟಿ ಜನರಿಗೆ ಸಹಾಯವಾಗುತ್ತಿತ್ತು. 

ಇದೀಗ ಇದೇ ಯೋಜನೆಯಲ್ಲಿ 7 ಕೆ.ಜಿ ಬದಲು 5 ಕೆ.ಜಿ ನೀಡಿ, ಮತ್ತಷ್ಟು ಧಾನ್ಯ ಸೇರ್ಪಡೆಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. 7 ಕೆಜಿ ಪೈಕಿ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು. ಉಳಿದ ಅಕ್ಕಿಯನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಮಾರುಕಟ್ಟೆಯಲ್ಲಿ ಕೆ.ಜಿ ಅಕ್ಕಿಗೆ ರೂ.26-28 ನೀಡಲಾಗುತ್ತಿದೆ. ಆದರೆ, ಜನರಿಗೆ ಸಹಾಯಕವಾಗಲೆಂದು ಉಚಿತವಾಗಿ ನೀಡಲಾಗುತ್ತಿದೆ .ಆದರೆ, ಪ್ರಸ್ತುತ ರಾಜ್ಯ ಸರ್ಕಾರ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ. ಹೀಗಾಗಿ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ  ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯನ್ನು ನೀಡಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಯೋಜನೆ ಜಾರಿಗೆ ಬಂದ ಬಳಿಕ ಜನರು ಹೆಚ್ಚೆಚ್ಚುಚ ಅಕ್ಕಿ ಬಳಕೆ ಮಾಡಲು ಆರಂಭಿಸಿದ್ದಾರೆ. ಅಕ್ಕಿಯನ್ನು ಹೆಚ್ಚು ಬಳಕೆ ಮಾಡದ ಜನರು ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಈ ಬಾರಿ ರಾಜ್ಯ ಸರ್ಕಾರದಲ್ಲಿಯೇ ಹಣ ಇಲ್ಲದ ಕಾರಣ 2 ಕೆಜಿ ಕಡಿತಗೊಳಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ರಾಜ್ಯ ಸರ್ಕಾರ ರೂ.10 ಕೋಟಿ ಉಳಿಸಲಿದೆ ಎಂದಿದ್ದಾರೆ. 

2 ಕೆಜಿ ಅಕ್ಕಿ ಬದಲಿಗೆ ಪ್ರತೀ ಕುಟುಂಬಕ್ಕೆ 1 ಕೆಜಿ ತೊಗರಿಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು ಹಾಗೂ 1 ಲೀಟರ್ ಎಣ್ಣೆ ನೀಡಲು ಚಿಂತಿಸಿದೆ. ಈಗಾಗಲೇ ಈ ಬಗ್ಗೆ ಅಂದಾಜು ವೆಚ್ಚವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆಯೂ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ. ಈ ಧಾನ್ಯ ಹಾಗೂ ಇನ್ನಿತರೆ ವಸ್ತುಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಎಲ್ಲವನ್ನೂ ಉಚಿತವಾಗಿ ನೀಡಲು ಸಾಧ್ಯವಾಗುವುದಿಲ್ಲ. ನಮ್ಮ ಒಟ್ಟಾರೆ ಬಜೆಟ್ ರೂ.3,.700 ಕೋಟಿಯಾಗಿದ್ದು, ಇದರಲ್ಲಿ ರೂ.3.650 ಕೋಟಿ ಅಕ್ಕಿ ಖರೀದೆಗೆ ಹೆಚ್ಚು ವ್ಯಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಇನ್ನು ಉತ್ತರ ಕರ್ನಾಟಕದಲ್ಲಿಯೂ ಅಕ್ಕಿಯನ್ನು ಕಡಿಮೆ ಮಾಡಿ, ಗೋಧಿ ಅಥವಾ ಜೋಳ ನೀಡಲು ನಿರ್ಧರಿಸಲಾಗಿದ್ದು, ಹಳೇ ಮೈಸೂರಿನಲ್ಲಿ ರಾಗಿ ನೀಡಲು ಚಿಂತನೆಗಳು ನಡೆಯುತ್ತಿವೆ. ಈ ಬಗ್ಗೆ ಶೀಘ್ರದಲ್ಲಿಯೇ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಗೋಪಾಲಯ್ಯ ಅವರು ಮಾತ್ರ ಯಾವುದೇ ಮಾಹಿತಿಯನ್ನು ನೀಡಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com