ದಾವಣಗೆರೆ: 'ಮೂಲ ನಕ್ಷತ್ರ'ದಲ್ಲಿ ಹುಟ್ಟಿತ್ತೆಂದು ಹೆಣ್ಣು ಮಗುವನ್ನು ಮಾರಾಟ ಮಾಡಿದ ಪೋಷಕರು

ಮೂಲ ನಕ್ಷತ್ರದಲ್ಲಿ ಹುಟ್ಟಿತ್ತೆಂಬ ಮೂಢನಂಬಿಕೆಯಿಂದ ಇಲ್ಲಿನ ಅಂಬೇಡ್ಕರ್ ನಗರದ ಪೋಷಕರು  1 ವರ್ಷದ ಹೆಣ್ಣು ಮಗುವನ್ನು ಮಕ್ಕಳಿಲ್ಲದ ಹಾವೇರಿಯ ದಂಪತಿಗೆ ಮಾರಾಟ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದಾವಣಗೆರೆ:  ಮೂಲ ನಕ್ಷತ್ರದಲ್ಲಿ ಹುಟ್ಟಿತ್ತೆಂಬ ಮೂಢನಂಬಿಕೆಯಿಂದ ಇಲ್ಲಿನ ಅಂಬೇಡ್ಕರ್ ನಗರದ ಪೋಷಕರು  1 ವರ್ಷದ ಹೆಣ್ಣು ಮಗುವನ್ನು ಮಕ್ಕಳಿಲ್ಲದ ಹಾವೇರಿಯ ದಂಪತಿಗೆ ಮಾರಾಟ ಮಾಡಿದ್ದಾರೆ.

ಈ ಸಂಬಂಧ ಅಪರಿಚಿತರು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದು,ಕಾರ್ಯಪ್ರವೃತ್ತರಾದ ಮಹಿಳಾ ಪೊಲೀಸ್ ತಂಡ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾರಾಟ ಮಾಡಲಾಗಿದ್ದ ಮಗುವನ್ನು ರಕ್ಷಿಸಿದ್ದಾರೆ. 

ಅಶುಭ ಮೂಲ ನಕ್ಷತ್ರದಲ್ಲಿ  ಹುಟ್ಟಿದ್ದರಿಂದ ಮಗುವನ್ನು ಮಾರಾಟ ಮಾಡಿದ್ದಾಗಿ ಅಂಬೇಡ್ಕರ್ ನಗರದ ದಂಪತಿ ಮಂಜುನಾಥ್ ಹಾಗೂ ಕವಿತಾ  ವಿಚಾರಣೆ ವೇಳೆಯಲ್ಲಿ ಹೇಳಿದ್ದಾರೆ ಎಂದು ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್ ಕುಮಾರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಾಣೆ ಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ದಾಕ್ಷಾಯಿಣಿ ಹಾಗೂ ಸಿಧು ಎಂಬವರಿಗೆ 25 ಸಾವಿರ ರೂಪಾಯಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು. 

ಡಿಸೆಂಬರ್ 26 ರಂದು ನಡೆದಿದ್ದ ಈ ಮಗು ಮಾರಾಟದ ಬಗ್ಗೆ ಅಪರಿಚಿತರು ಮಕ್ಕಳ ಸಹಾಯವಾಣಿಯಲ್ಲಿ ದೂರು ದಾಖಲಿಸಿದ್ದರು.  ಮೊದಲಿಗೆ ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದ ಪೊಲೀಸರು ಮಗುವಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಲಸಿಕೆಗೆ ಸಂಬಂಧಿಸಿದ ಮಾಹಿತಿ ದೊರೆಯದಿದ್ದಾಗ ಮಗು ಮಾರಾಟದ ಶಂಕೆ ವ್ಯಕ್ತವಾಗಿದೆ.

ನಂತರ ಮಗು ಮಾರಾಟ ಜಾಲವನ್ನು ಯಶಸ್ವಿಯಾಗಿ ಬೇಧಿಸಿದ್ದು, ಮಂಜುನಾಥ್ ತಪ್ಪೊಪ್ಪಿಕೊಂಡಿದ್ದಾನೆ. ನಂತರ ದಾಕ್ಷಾಯಿಣಿ ಮತ್ತು  ಸಿಧು ಅವರಿಂದ ಮಗುವನ್ನು ಪಡೆದು ಗರ್ಲ್ ಚೈಲ್ಡ್ ಹೋಮ್ ಗೆ ಸೇರಿಸಲಾಗಿದೆ. 

ಈ ಪ್ರಕರಣಕ್ಕೆ  ಸಂಬಂಧಿಸಿದಂತೆ ಕವಿತಾ, ಮಂಜುನಾಥ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದು ದಾವಣಗೆರೆ ಜಿಲ್ಲೆಯಲ್ಲಿ ಎರಡನೇ ಪ್ರಕರಣವಾಗಿದೆ.  2017 ಡಿಸೆಂಬರ್ 22 ರಲ್ಲಿ ಇದೇ ರೀತಿಯಲ್ಲಿ ಹೆಣ್ಣು ಮಗುವೊಂದನ್ನು ಮಾರಾಟ ಮಾಡಲಾಗಿತ್ತು. 

ಈ ಪ್ರಕರಣ ಸಂಬಂಧ  2019 ಅಕ್ಟೋಬರ್ 5 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ 5 ಸಾವಿರ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com