ಬೆಂಗಳೂರು ಲಾಕ್‌ಡೌನ್ ಮಾಡಲು ಹಲವು ತಜ್ಞರಿಂದ ಸಲಹೆ: ಸಚಿವ ಸುಧಾಕರ್

ಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣಕ್ಕೆ ಬೆಂಗಳೂರಿನ ಜನತೆಯ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ, ಆದರೆ, ಕೋವಿಡ್ ವಿಚಾರದಲ್ಲಿ ಬೆಂಗಳೂರನ್ನು ಸರಿದಾರಿಗೆ ತರುವುದು ಹೇಗೆ ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Published: 11th July 2020 07:14 PM  |   Last Updated: 11th July 2020 07:14 PM   |  A+A-


Minister K Sudhakar

ಸಚಿವ ಸುಧಾಕರ್

Posted By : lingaraj
Source : UNI

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣಕ್ಕೆ ಬೆಂಗಳೂರಿನ ಜನತೆಯ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ, ಆದರೆ, ಕೋವಿಡ್ ವಿಚಾರದಲ್ಲಿ ಬೆಂಗಳೂರನ್ನು ಸರಿದಾರಿಗೆ ತರುವುದು ಹೇಗೆ ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ದಿನೇ ದಿನೇ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಬೆಂಗಳೂರಿನ ಜನರ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ. ಆದರೆ, ಜನರಿಂದ ಸರ್ಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯುತ್ತಿಲ್ಲ ಎಂಬುದು ಸತ್ಯ. ಆದರೆ, ಬೆಂಗಳೂರನ್ನು ಕೋವಿಡ್ ವಿಚಾರದಲ್ಲಿ ಹೇಗೆ ನಿಯಂತ್ರಣಕ್ಕೆ ತರಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಲಾಕ್‌ಡೌನ್ ಮಾಡುವ ಬಗ್ಗೆ ಸಾಕಷ್ಟು ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಮತ್ತಷ್ಟು ಸಲಹೆಗಳನ್ನು ಪಡೆದುಕೊಂಡು ನಂತರ ಲಾಕ್‌ಡೌನ್ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ. ಎಲ್ಲರೂ ಮಾಸ್ಕ್, ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಕೆ ಮಾಡುವ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿದಲ್ಲಿ ಕೋವಿಡ್ ಸೋಂಕನ್ನು ಶೇ.95 ರಷ್ಟು ತಡೆಯಬಹುದು ಎಂದರು.

ರಾಜ್ಯದ ಜನತೆ ಈ ವಿಚಾರದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು. ಮಾಧ್ಯಮಗಳೂ ಸಹ ಜನರಿಗೆ ಸಕಾರಾತ್ಮಕ ಸುದ್ದಿಗಳನ್ನು ತಲುಪಿಸಬೇಕಾದ ಜವಾಬ್ದಾರಿಯಿದೆ. ಸೋಂಕಿತರ ಸಂಖ್ಯೆಯನ್ನು ಹೇಳುವ ಜೊತೆಗೆ ಗುಣಮುಖರಾದವರ ಬಗ್ಗೆಯೂ ಜನರಿಗೆ ಮಾಹಿತಿ ನೀಡಿ ಅವರಲ್ಲಿನ ಆತಂಕವನ್ನು ದೂರ ಮಾಡಬೇಕು ಎಂದು ಮಾಧ್ಯಮಗಳಿಗೆ ಸಲಹೆ ಮಾಡಿದರು.

ಕೋವಿಡ್ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಸರ್ಕಾರ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಂದ ಸೂಕ್ತ ಸಹಕಾರ ದೊರೆಯುತ್ತಿಲ್ಲ. ಸರ್ಕಾರ ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿ ಈಗಾಗಲೇ ಅಲ್ಲಿನ ಸರ್ಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ತೆಗೆದುಕೊಂಡು ಶೇ.80ರಷ್ಟು ಹಾಸಿಗೆಗಳನ್ನು ಕೋವಿಡ್‌ಗೆಂದೇ ಮೀಸಲಿಟ್ಟಿದೆ. ಈ ಪರಿಸ್ಥಿತಿ ಕರ್ನಾಟಕ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬರುವುದು ಬೇಡ ಎಂದು ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುವಂತೆ ಸಲಹೆ ಮಾಡಲಾಗಿದೆ ಎಂದು ತಿಳಿಸಿದರು.


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp