ಅದಲು ಬದಲಾದ ಶವ: ಬಿಮ್ಸ್ ಆಸ್ಪತ್ರೆಯ ಯಡವಟ್ಟಿಗೆ ತಬ್ಬಿಬ್ಬಾದ ಕುಟುಂಬ!

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ನಲ್ಲಿ ನಿತ್ಯ ಒಂದಲ್ಲ ಒಂದು ಲೋಪಗಳು ಕೇಳಿ ಬರುತ್ತಲೇ ಇವೆ. ಸೋಂಕಿತ ವೃದ್ಧ ಮತ್ತು ಮಹಿಳೆ ಬಿಮ್ಸ್ ನಲ್ಲಿ ನರಳಿ ನರಳಿ ಮೃತಪಟ್ಟಿರುವ ಸುದ್ದಿ ಹಸಿರಾಗಿರುವಾಗಲೇ ಈಗ ಸೋಂಕಿತರ ಶವ ಬದಲು ಬದಲಾಗಿರುವ ಆರೋಪ ಕೇಳಿ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್)ನಲ್ಲಿ ನಿತ್ಯ ಒಂದಲ್ಲ ಒಂದು ಲೋಪಗಳು ಕೇಳಿ ಬರುತ್ತಲೇ ಇವೆ. ಸೋಂಕಿತ ವೃದ್ಧ ಮತ್ತು ಮಹಿಳೆ ಬಿಮ್ಸ್ ನಲ್ಲಿ ನರಳಿ ನರಳಿ ಮೃತಪಟ್ಟಿರುವ ಸುದ್ದಿ ಹಸಿರಾಗಿರುವಾಗಲೇ ಈಗ ಸೋಂಕಿತರ ಶವ ಬದಲು ಬದಲಾಗಿರುವ ಆರೋಪ ಕೇಳಿ ಬಂದಿದೆ. 

ಕೊರೋನಾ ಸೋಂಕಿತೆ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ 57 ವರ್ಷದ ವೃದ್ಧೆಯ ಶವವೇ ಈಗ ಅದಲು ಬದಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಬಿಮ್ಸ್ ನ ಸಿಬ್ಬಂದಿ ನಿಮ್ಮ ಸಂಬಂಧಿಯ ಶವವನ್ನು ತೆಗೆದುಕೊಂದು ಹೋಗುವಂತೆ ಕರೆ ಮಾಡಿ ತಿಳಿಸಿದ್ದೇ ಈ ಅನುಮಾನ ಹುಟ್ಟುಹಾಕಲು ಕಾರಣವಾಗಿದೆ. 

ಇದೆಲ್ಲಕ್ಕಿಂತ ಮುಖ್ಯವಾಗಿ ಚು.18ರಂದೇ ಮಹಿಳೆಯ ಶವವನ್ನು ಕೋವಿಡ್-19 ನಿಯಮಗಳಂತೆಯೇ ಮೃತ ಮಹಿಳೆಯ ಒಬ್ಬ ಸಂಬಂಧಿಯ ಮುಂದೆಯೇ ಅಂತ್ಯಕ್ರಿಯೆ ಮಾಡಲಾಗಿತ್ತು. ಹಾಗಾದರೆ ಅಂತ್ಯಕ್ರಿಯೆ ಮಾಡಿದ ಈ ಮಹಿಳೆಯ ಶವ ಯಾರದೆಂಬ ಪ್ರಶ್ನೆ ಸಂಬಂಧಿಕರಿಗೆ ಎದುರಾಗಿದೆ. 

ತೀವ್ರ ಅಸ್ತಮಾದಿಂದ ಬಳಲುತ್ತಿದ್ದ 57 ವರ್ಷದ ಮಹಿಳೆಯನ್ನು ಜು.11ರಂದು ಬಿಮ್ಸ್ ಆಸ್ಪತ್ರೆ ದಾಖಲಿಸಲಾಗಿತ್ತು. ಇವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್'ಗೆ ಸ್ಥಳಾಂತರ ಮಾಡಲಾಗಿತ್ತು. ಜು.18ರಂದು ಬೆಳಿಗ್ಗೆ ಮೃತ ಮಹಿಳೆ ತನ್ನ ಕುಟುಂಬದ ಸದಸ್ಯರೊಂದಿಗೆ ಕರೆ ಮಾಡಿದ್ದು, ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಮಾತ್ರೆ ನೀಡುತ್ತಿಲ್ಲ. ವೈದ್ಯ, ಸಿಬ್ಬಂದಿ ಯಾರೂ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಅದೇ ದಿನ ಸಂಜೆ 4 ಗಂಟೆಗೆ ಮೃತಪಟ್ಟಿರುವುದಾಗಿ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದರು. 

ಇದಾದನಂತರ ಅದೇ ದಿನ ಆ್ಯಂಬುಲೆನ್ಸ್ ನಲ್ಲಿಯೇ ಶವ ಇಟ್ಟುಕೊಂಡ ಬಿಮ್ಸ್ ಸಿಬ್ಬಂದಿ ಕುಟುಂಬದ ಒಬ್ಬ ಸದಸ್ಯನನ್ನು ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದಾದ ಬಳಿಕ ಬಿಮ್ಸ್ ಆಸ್ಪತ್ರೆಯಿಂದ ಸೋಮವಾರ ಮತ್ತೊಂದು ದೂರವಾಣಿ ಕರೆ ಬಂದಿದ್ದು, ನಿಮ್ಮ ಸಂಬಂಧಿ ಶವ ಇನ್ನೂ ತೆಗೆದುಕೊಂಡು ಹೋಗಿಲ್ಲವೇಕೆ? ಕೂಡಲೇ ತೆಗೆದುಕೊಂಡು ಹೋಗಿ ಎಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಮೃತರ ಕುಟುಂಬಕ್ಕೆ ಕರೆ ಮಾಡಿ ತಿಳಿಸಿದ್ದಾರೆ. 

ಈ ಮಾಹಿತಿಯಿಂದ ತಬ್ಬಿಬ್ಬಾದ ಸಂಬಂಧಿಕರು, ಹಾಗಾದರೆ ಜು.18ರಂದು ಯಾರ ಶವವನ್ನು ನಾವು ಅಂತ್ಯಕ್ರಿಯೆ ಮಾಡಿದ್ದೇವೆಂಬ ಗೊಂದಲದಲ್ಲಿದ್ದಾರೆ. 

ಬಿಮ್ಸ್ ನವರು ನಿಮ್ಮ ಸಂಬಂಧಿಕರ ಶವ ಇದೆ ತೆಗೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಹಾಗಾದರೆ, ಸಿಬ್ಬಂದಿ ನಮಗೆ ಯಾರ ಶವ ಹಸ್ತಾಂತರ ಮಾಡಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಆದರೆ, ಅಮಾವಾಸ್ಯೆಯಿದೆ. ಹಾಗಾಗಿ ನಾವು ಬರುವುದಿಲ್ಲ ಎಂದು ಮೃತ ಮಹಿಳೆ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಇದೇ ವೇಳೆ ಶವವನ್ನು ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ಕುಟುಂಬದ ಸದಸ್ಯರು ದೂರು ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಯವರು, ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 

ಬಿಮ್ಸ್ ಆಸ್ಪತ್ರೆಯ ಕಾರ್ಯವೈಖರಿಗಳ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳನ್ನೂ ನೋಡಿದ್ದೇನೆ. ಪರಿಸ್ಥಿತಿ ಅವಲೋಕಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com