ನಾಳೆಯಿಂದ ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ಇರಲ್ಲ: ಸಿಎಂ

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಾಳೆ ಬೆಳಗ್ಗೆ ಅಂತ್ಯವಾಗಲಿದ್ದು, ನಾಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ....
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಾಳೆ ಬೆಳಗ್ಗೆ ಅಂತ್ಯವಾಗಲಿದ್ದು, ನಾಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.

ಒಂದು ವಾರದ ಲಾಕ್‍ಡೌನ್ ಮುಗಿಯುತ್ತಿದ್ದಂತೆ ಇಂದು ಫೇಸ್ ಬುಕ್ ಲೈವ್ ನಲ್ಲಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕೊರೋನಾ ಕಟ್ಟಿಹಾಕಲು ಲಾಕ್ ​ಡೌನ್​ ಒಂದೇ ಪರಿಹಾರವಲ್ಲ. ಈ ಹೋರಾಟದಲ್ಲಿ ಜನರು ಸಹ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ದೇಶದೆಲ್ಲೆಡೆ ಕೊರೋನಾ ವೈರಸ್​ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಕೋವಿಡ್​ ನಿಯಂತ್ರಣ ಮಾಡುವುದರಲ್ಲಿ ಪ್ರಾರಂಭದಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹಾಗೂ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ಇದನ್ನು ತೊಲಗಿಸಲು ಲಾಕ್​ಡೌನ್​ ಒಂದೇ ಪರಿಹಾರವಲ್ಲ. ಜನರು ಕೋವಿಡ್​ ತೊಲಗಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಸ್ಕ್​ಗಳನ್ನು ಪ್ರತಿಯೊಬ್ಬರು ಕಡ್ಡಾಯ ಧರಿಸಬೇಕು ಎಂದು ಹೇಳಿದರು.

ನಾಳೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಭಾಗದಲ್ಲೂ ಲಾಕ್ ಡೌನ್ ಇರುವುದಿಲ್ಲ. ಅರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಮುಖ್ಯ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಸಚಿವರು, ಶಾಸಕರು, ಸ್ವಯಂ ಸೇವಾ ಸಂಸ್ಥೆಗಳು ವೈದ್ಯರು, ಪೊಲೀಸರು ಸೇರಿದಂತೆ ಆಶಾ ಕಾರ್ಯ ಕರ್ತರು ಹಗಲು ರಾತ್ರಿಯೆನ್ನದೇ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಎಲ್ಲರೂ ತಮ್ಮ ಪ್ರಾಣದ ಹಂಗು ತೊರೆದು ನಮಗಾಗಿ ಕರ್ತವ್ಯ ಮಾಡಬೇಕಾದರೇ ಸರ್ಕಾರ ನಿಯಮಾವಳಿ ಅಡಿ ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಕೊರೋನಾ ನಿಯಂತ್ರಣಕ್ಕೆ ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕೆಲಸ ಮಾಡಲೇಬೇಕು ಎಂದು ಮನವಿ ಮಾಡಿದರು.

ಕೊರೋನಾ ನಿಯಂತ್ರಣಕ್ಕೆ ವೈದ್ಯಕೀಯ ತಜ್ಞರು 5ಟಿ ತಂತ್ರ ಬಳಸುವಂತೆ ಸೂಚಿಸಿದ್ದಾರೆ. ಟೆಸ್ಟ್, ಟ್ರ್ಯಾಕ್​​, ಟ್ರೇಸ್, ಟ್ರೀಟ್​​ ಅಂಡ್​​ ಟೆಕ್ನಾಲಜಿ ಎಂಬುದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ತಂತ್ರಜ್ಞಾನದ ಮೂಲಕ 5ಟಿಯನ್ನು ಅನುಷ್ಟಾನಕ್ಕೆ ತರುವುದರಲ್ಲಿ ನಾವು ಮುಂದೆ ಇದ್ದೆವೆ. ಎಲ್ಲರೂ ಇದನ್ನು ಪಾಲಿಸುವ ಮೂಲಕ ಕೊರೋನಾ ನಿಯಂತ್ರಣ ಸಾಧ್ಯ. ಕೋವಿಡ್​​ ಮತ್ತು ನಾನ್​​ ಕೋವಿಡ್​​ ರೋಗಿಗಳ ಖಾಸಗಿ ಆಸ್ಪತ್ರೆ ಗಳಲ್ಲಿ ದಾಖಲಿಸಿಕೊಳ್ಳಲು ಆಗುತ್ತಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ರಾಜ್ಯದ ಶೇ.80ಕ್ಕಿಂತ ಹೆಚ್ಚು ಸೋಂಕಿತರಲ್ಲಿ ಯಾವುದೇ ರೋಗಲಕ್ಷಣ ಕಂಡು ಬರುತ್ತಿಲ್ಲ. ಹೀಗಾಗಿ ಅವರನ್ನು ಹೋಮ್ ಕ್ವಾರಂಟೈನ್ ​ ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಇರಿಸಲಾಗುತ್ತಿದೆ. ಇದಕ್ಕೆ ಬೆಂಗಳೂರಿನ ಜನ ಸಹಕರಿಸಬೇಕು ಎಂದರು.

ಬಿಬಿಎಂಪಿ, ರಾಜ್ಯ ಸರ್ಕಾರ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ.ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 11 ಸಾವಿರ ಬೆಡ್​ ವ್ಯವಸ್ಥೆ ಮಾಡಲಾಗಿದೆ. ಹೊರ ರಾಜ್ಯದಿಂದ ಬರುವ ಎಲ್ಲರ ಮೇಲೆಯೂ ನಿಗಾ ಇಡಲಾಗುತ್ತಿದೆ. ಕೋವಿಡ್-19 ಉಪಕರಣ ಖರೀದಿಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ. ಯಾವುದೇ ಮಾಹಿತಿಯನ್ನು ನಾವು ವಿಪಕ್ಷದ ನಾಯಕರಿಗ ನೀಡಲು ಸಿದ್ದರಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಯಾವುದೇ ದಾಖಲೆಯನ್ನು ಪರಿಶೀಲಿಸಲಿ. ಕರ್ನಾಟಕ ಸರ್ಕಾರ ಮಹಾಮಾರಿ ವಿರುದ್ದ ಹೋರಾಟ ನಡೆಸುತ್ತಿರುವಾಗ ಕೋವಿಡ್ ನಲ್ಲಿ ಔಷಧಿ, ಉಪಕರಣ ಸೇರಿದಂತೆ ಯಾವುದರಲ್ಲೂ ಒಂದು ರೂಪಾಯಿ ಭ್ರಷ್ಟಾಚಾರ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 6500 ಮಂಚ, ಹಾಸಿಗೆ, ದಿಂಬು ಬಾಡಿಗೆ ಪಡೆಯುವ ವಿಚಾರ ತಮ್ಮ ಗಮನಕ್ಕೆ ಬಂದ ಕೂಡಲೆ ಬಾಡಿಗೆ ಪಡೆಯುವುದನ್ನು ನಿಲ್ಲಿಸಿ 7.25 ಕೋಟಿರೂಗೆ ಖರೀದಿಸುವಂತೆ ಸೂಚಿಸಿದ್ದನೆ. ಅಲ್ಲದೆ 4.25 ಕೋಟಿ ರೂ ಗಳಲ್ಲಿ ಇತರೆ ಪರಿಕರಗಳನ್ನು ಬಾಡಿಗೆ ಪಡೆಯುವಂತೆ ನಿರ್ದೇಶನ ನೀಡಿದ್ದೇನೆ ಎಂದರು.

ಜೊತೆಗೆ ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಬಳಸಿರುವ ಹಾಸಿಗೆಗಳನ್ನು ಮರು ಬಳಕೆ ಮಾಡುವುದಿಲ್ಲ.ಯಾವುದೇ ಹಾಸ್ಟೆಲ್, ಕ್ರೀಡಾ ಇಲಾಖೆ ವಸತಿ ನಿಲಯಗಳಿಗೆ ನೀಡದೆ ಅದನ್ನು ಸುಟ್ಟು ಹಾಕಲಾಗುವುದು. ಕೇವಲ ಮಂಚ ಮತ್ತಿತರ ಮರು ಬಳಕೆ ಉಪಕರಣಗಳನ್ನು ಸ್ಯಾನಿಟೈಸ್ ಮಾಡಿ ಮರು ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ಕೊರೋನಾ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. 60 ವರ್ಷ ಮೇಲ್ಪಟ್ಟವರು ದಯವಿಟ್ಟು ಮನೆಯಿಂದ ಹೊರಬರದೆ ಆರೋಗ್ಯ ಕಾಪಾಡಿಕೊಳ್ಳಿ. ಮನೆಯಲ್ಲಿರುವ ಕಿರಿಯರು ಹಿರಿಯರನ್ನು ಆದಷ್ಟು ಹೊರಬರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಏನೇ ಆದರೂ ಮಾಸ್ಕ್​​ ​​,ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com