ಆರೋಗ್ಯ ಸಿಬ್ಬಂದಿ ‌ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಾನೂನು ಕ್ರಮ: ಕಲಬುರಗಿ ಜಿಲ್ಲಾಧಿಕಾರಿ ಶರತ್

ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ / ಕ್ಲಿನಿಕ್ ಸಿಬ್ಬಂದಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ.ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಶರತ್
ಜಿಲ್ಲಾಧಿಕಾರಿ ಶರತ್

ಕಲಬುರಗಿ: ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ / ಕ್ಲಿನಿಕ್ ಸಿಬ್ಬಂದಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ.ಮನವಿ ಮಾಡಿದ್ದಾರೆ.

ದೇಶದಲ್ಲಿಯೇ ಕೊರೊನಾ ವೈರಸ್ ಸೋಂಕಿಗೆ ಮೊದಲ ಮೃತ ಪ್ರಕರಣದಿಂದ ಸುದ್ದಿಯಾದ ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸಕ್ರಿಯ ಸೋಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯ ಈ  ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ‌ ಮಹಾಮಾರಿಗೆ ಹೆದರಿ ಬಹುತೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದು ಗಮನಕ್ಕೆ ಬಂದಿದೆ. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸಿಬ್ಬಂದಿಗಳೇ ಇಲ್ಲದಿದ್ದರೆ ಚಿಕಿತ್ಸೆಗೆ ತುಂಬಾ ತೊಂದರೆಯಾಗಲಿದೆ.  ಕಲಬುರ್ಗಿಯಲ್ಲಿ ಸೋಂಕಿನ ನಿಯಂತ್ರಣಕ್ಕೆ ಖಾಸಗಿ ವೈದ್ಯರು ಸಹಕರಿಸುತ್ತಿಲ್ಲ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ವ್ಯಾಪಕಗೊಳ್ಳುತ್ತಿದೆ. ಒಂದಂಕಿಯಲ್ಲಿದ್ದ ಸೋಂಕಿತರ ಎರಡಂಕಿ ದಾಟಿ, ಈಗ ಮೂರಂಕಿಗೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬಹುತೇಕ ಐಸಿಯು ಕೇಂದ್ರ ಬೆಡ್ ಗಳು ಭರ್ತಿಯಾಗಿವೆ ಎಂದರು.

ಜಿಮ್ಸ್ ನಲ್ಲಿ 28, ಇ.ಎಸ್.ಐ.ಯಲ್ಲಿ 30, ಬಸವೇಶ್ವರಲ್ಲಿ 24 ಐಸಿಯು ಬೆಡ್ ಗಳಿದ್ದು ಬಹುತೇಕ ಭರ್ತಿಯಾಗಿವೆ. ಹೆಚ್ಚುವರಿಯಾಗಿ ಟ್ರಾಮಾ ಕೇರ್ಸ ಸೆಂಟರ್ ನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಲ್ಲಿಯೂ ಐಸಿಯು ವ್ಯವಸ್ಥೆ ಮಾಡಿ 30 ಬೆಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 30 ಬೆಡ್ ಗೂ ವ್ಯವಸ್ಥೆ ಮಾಡಲು  ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇರುವುದರಿಂದ, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಒಂದಷ್ಟು ತೊಂದರೆಯಾಗುತ್ತಿದೆ. ಅದರಲ್ಲಿಯೂ ಖಾಸಗಿ ವೈದ್ಯರ ಅಸಹಕಾರದಿಂದ ದೊಡ್ಡ ಸಮಸ್ಯೆ ಎದುರಿಸುವಂತಾಗಿದೆ.

ಐಸಿಯು ವ್ಯವಸ್ಥೆ, ಬೆಡ್ ಗಳ ವ್ಯವಸ್ಥೆಯನ್ನು ಹೇಗೋ ಮಾಡಬಹುದು. ಆದರೆ ಸೇವೆ ಮಾಡುವ ವೈದ್ಯರೇ ಲಭ್ಯವಿಲ್ಲವೆಂದರೆ ಹೇಗೆ ಮಾಡುವುದು. ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಸಹಕಾರ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಲು ಹೇಳಿದ್ದರೂ ಯಾರೂ ಅದನ್ನು  ಗಂಭೀರವಾಗಿ ತೆಗದೆುಕೊಂಡಿಲ್ಲ. ಎರಡು-ಮೂರು ಆಸ್ಪತ್ರೆಯವರು ಸೇರಿ, ಒಂದು ಆಸ್ಪತ್ರೆಯನ್ನು ಕೋವಿಡ್ ಗಾಗಿ ಮೀಸಲಿಟ್ಟು, ಉಳಿದ ಆಸ್ಪತ್ರೆಗಳನ್ನು ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಈ ರೀತಿ ಮಾಡಲು ಯಾವುದೇ ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿಲ್ಲ  ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕೋವಿಡ್ ವಾರ್ಡ್ ಗಳಲ್ಲಿ ಕೆಲಸ ಮಾಡಲು ಖಾಸಗಿ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಡಿಸಿ ಶರತ್ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಐ.ಎಂ.ಎ ಪ್ರತಿನಿಧಿಗಳ ಜೊತೆ ಚರ್ಚಿಸಿದ್ದೇನೆ. ಖಾಸಗಿ ವೈದ್ಯರ ಜೊತೆ ಮಾತನಾಡಲು ಹೇಳಿದ್ದೇನೆ. ಕೊವಿಡ್ ಕರ್ತವ್ಯ ಮಾಡಲು ಖಾಸಗಿ ವೈದ್ಯರ  ಮನವೊಲಿಕೆಗೆ ಕೇಳಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯರ ಸಹಕಾರ ಅತ್ಯಗತ್ಯ ಎಂದು ಕಲಬುರ್ಗಿ ಡಿಸಿ ಶರತ್ ಅಸಹಾಯತೆ ತೋಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪರಿಸ್ಥಿತಿ ಮತ್ತಷ್ಟು  ಭಯಾನಕವಾಗಿರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com