ಕೋವಿಡ್-19: ಪಾದರಾಯನಪುರದಲ್ಲಿ ರಾಂಡಮ್ ಸ್ಯಾಂಪಲ್ ಟೆಸ್ಟಿಂಗ್ ಸ್ಥಗಿತ!

ಶೀಘ್ರಗತಿಯಲ್ಲಿ ಕೊರೋನಾ ಸೋಂಕು ಹರಡಿ ನಗರದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದ್ದ ಪಾದರಾಯನಪುರದಲ್ಲಿ ಸಮುದಾಯ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶೀಘ್ರಗತಿಯಲ್ಲಿ ಕೊರೋನಾ ಸೋಂಕು ಹರಡಿ ನಗರದ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದ್ದ ಪಾದರಾಯನಪುರದಲ್ಲಿ ಸಮುದಾಯ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. 

ಸೋಂಕು ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದ ಕಾರಣ ಏಪ್ರಿಲ್ 10 ರಂದು ಪಾದರಾಯನಪುರವನ್ನು ಸೀಲ್'ಡೌನ್ ಮಾಡಲಾಗಿತ್ತು. ಇದಾದ ಬಳಿಕ ಬಿಬಿಎಂಪಿ ಅಧಿಕಾರಿಗಳು ಈ ಪ್ರದೇಶದಲ್ಲಿರುವ ಪ್ರತೀಯೊಬ್ಬರನ್ನೂ ಪರೀಕ್ಷೆಗೊಳಪಡಿಸಲಾಗುವುದು ಎಂದು ಹೇಳಿದ್ದರು. ಹೊರ ರಾಜ್ಯದಿಂದ ಬೆಂಗಳೂರಿಗೆ ಆಗಮಿಸುತ್ತಿರುವವ ಸಂಖ್ಯೆ ಹೆಚ್ಚಾಗಿರುವುದರಿಂದ ಅವರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಬೇಕಾದ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ಸಮುದಾಯ ಸೋಂಕು ಪರೀಕ್ಷೆ ಸ್ಥಗಿತಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 

ನಗರದಲ್ಲಿ ಬೆಳಕಿಗೆ ಬಂದಿರುವ ಒಟ್ಟಾರೆ ಪ್ರಕರಣಗಳ ಪೈಕಿ ಶೇ,12 ಪ್ರಕರಣಗಳು ಪಾದರಾಯನಪುರದಲ್ಲಿಯೇ ಕಂಡು ಬಂದಿದೆ. ಈ ವರೆಗೂ ಆ ಪ್ರದೇಶದಲ್ಲಿ ಒಟ್ಟು 67 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕೂಡ ಇದ್ದಾರೆ. ಇನ್ನೂ ಈ ಪ್ರದೇಶದಲ್ಲಿ 8 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಕೂಡ ಸೇರಿದ್ದಾರೆ. 

ಈ ವರೆಗೂ ಈ ಪ್ರದೇಶದಲ್ಲಿ 1,200 ರ್ಯಾಂಡಮ್ ಸ್ಯಾಂಪಲ್ಸ್ ಗಳನ್ನು ಸಂಗ್ರಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹಾಗೂ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ತಾತ್ಕಾಲಿಕವಾಗಿ ಸಮುದಾಯ ಕೊರೋನಾ ಸೋಂಕು ಪರೀಕ್ಷೆ ನಿಲ್ಲಿಸಿದ್ದೇವೆ. ಆದರೆ, ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ, ಅನುಮಾನ ವ್ಯಕ್ತವಾದರೆ ಅವರನ್ನು ಕೂಡಲೇ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 

ಪಾದರಾಯನಪುರದಲ್ಲಿ ಏ.14ರಿಂದ ನಡೆದ ಸಮುದಾಯ ಕೊರೋನಾ ಸೋಂಕು ಪರೀಕ್ಷೆಯಲ್ಲಿ ಒಟ್ಟು 853 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಒಟ್ಟು ಮೂರು ಮಂದಿಗೆ ಸೋಂಕು ದೃಢಪಟ್ಟಿದೆ. ರ್ಯಾಂಡಮ್ ಸೋಂಕು ಪರೀಕ್ಷೆ ವೇಳೆ 214ರಲ್ಲಿ ಏಳು ಜನರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com