ಭೂಗತ ಪಾತಕಿ ರವಿಪೂಜಾರಿಯಿಂದ ಕಮಿಷನ್ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿ!

ಪೊಲೀಸ್ ಅಧಿಕಾರಿಯೊಬ್ಬರು ಭೂಗತ ಪಾತಕಿ ರವಿಪೂಜಾರಿಯಿಂದ ಕಮಿಷನ್ ಪಡೆಯುತ್ತಿದ್ದ ಎಂಬ ಸ್ಫೋಟಕ ಅಂಶ ಇದೀಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭೂಗತ ಪಾತಕಿ ರವಿ ಪೂಜಾರಿ
ಭೂಗತ ಪಾತಕಿ ರವಿ ಪೂಜಾರಿ

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು ಭೂಗತ ಪಾತಕಿ ರವಿಪೂಜಾರಿಯಿಂದ ಕಮಿಷನ್ ಪಡೆಯುತ್ತಿದ್ದ ಎಂಬ ಸ್ಫೋಟಕ ಅಂಶ ಇದೀಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

'ನನ್ನ ಸಹಚರರು ಹಫ್ತಾ ವಸೂಲಿಯಿಂದ ಬಂದ ಹಣದಲ್ಲಿ ಅಧಿಕಾರಿಗೆ ಕಮಿಷನ್ ಕೊಟ್ಟು ಉಳಿದ ಹಣವನ್ನು ನನಗೆ ಕಳುಹಿಸುತ್ತಿದ್ದರು. ಆ ಅಧಿಕಾರಿ ಜತೆಗೆ ಹಲವು ಬಾರಿ ಇಂಟರ್‌ನೆಟ್ ಕರೆಗಳ ಮೂಲಕ ಸಂಭಾಷಣೆ ನಡೆಸಿದ್ದೇನೆ. ತನ್ನ ಸಹಚರರ ಜತೆಗೂ ಪೊಲೀಸ್ ಅಧಿಕಾರಿ ಸಂಪರ್ಕದಲ್ಲಿ ಇದ್ದರು...." ಎಂಬ ಭಯಾನಕ ಅಂಶ ಬಂಧನಕ್ಕೊಳಗಾಗಿರುವ ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾಜ್ಯದ ಪೊಲೀಸ್ ಅಧಿಕಾರಿ ಜತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದು ಅವರಿಗೆ ಹಫ್ತಾ ವಸೂಲಿ ಮಾಡುತ್ತಿದ್ದ ಹಣದಲ್ಲಿ ಪಾಲು ಕೊಡುತ್ತಿದ್ದೆ ಎಂದು 25 ವರ್ಷಗಳ ಬಳಿಕ ಸೆರೆಸಿಕ್ಕಿರುವ ರವಿ ಪೂಜಾರಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಮಂಗಳೂರಿಂದ ಮುಂಬೈ ಭೂಗತ ಲೋಕಕ್ಕೆ ಕಾಲಿಟ್ಟ ರವಿ ಪೂಜಾರಿ, 1994ರಲ್ಲೇ ಮಹಾರಾಷ್ಟ್ರದಲ್ಲಿ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ನಂತರ ನೇಪಾಳದ ಮೂಲಕ ಉಗಾಂಡಾಗೆ ಹೋಗಿ ಅಲ್ಲಿಂದ ದಕ್ಷಿಣ ಆಫ್ರಿಕಾ ತಲುಪಿದ್ದ. ಅಲ್ಲಿದ್ದುಕೊಂಡೇ ತನ್ನ ಸಹಚರರ ನೆರವಿನಿಂದ ಭಾರತದ ಉದ್ಯಮಿಗಳು, ಸಿನಿಮಾ ರಂಗ, ಬಿಲ್ಡರ್ಸ್, ರಿಯಲ್ ಎಸ್ಟೇಟ್, ರಾಜಕಾರಣಿಗಳು ಸೇರಿ ಗಣ್ಯರಿಗೆ ಕರೆ ಮಾಡಿ ಬೆದರಿಕೆ ಒಡ್ಡಿ ಹಫ್ತಾ ವಸೂಲಿ ಮಾಡಿಸುತ್ತಿದ್ದ. ಕರ್ನಾಟಕದಲ್ಲೇ ರವಿ ಪೂಜಾರಿ ವಿರುದ್ಧ 97 ಕೇಸ್ ದಾಖಲಾಗಿವೆ.

ರವಿ ಪೂಜಾರಿಯ ಬೆದರಿಕೆ ಹಾಗೂ ಆತನ ಸಹಚರರು ನಡೆಸುತ್ತಿದ್ದ ಹಫ್ತಾ ವಸೂಲಿ ದಂಧೆಗೆ ಪೊಲೀಸ್ ಅಧಿಕಾರಿಯೊಬ್ಬರು ಸಹಕಾರ ಕೊಡುತ್ತಿದ್ದರು. ಸೆನೆಗಲ್‌ನಿಂದ ಫೆ.22ಕ್ಕೆ ರವಿ ಪೂಜಾರಿಯನ್ನು ರಾಜ್ಯಕ್ಕೆ ಕರೆತಂದಿದ್ದ ಪೊಲೀಸರು, ವಿವೇಕನಗರ ಮತ್ತು ವೈಯಾಲಿಕಾವಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರವಿ ಪೂಜಾರಿ ಜತೆ ನಂಟು ಹೊಂದಿದ್ದ ಆರೋಪದ ಹೊತ್ತಿರುವ ಎಸಿಪಿ ವಿರುದ್ಧ ಡಿಜಿಪಿ ಪ್ರವೀಣ್ ಸೂದ್‌ಗೆ ನಗರ ಪೊಲೀಸ್ ಆಯುಕ್ತ ಎಸ್.ಭಾಸ್ಕರ್ ರಾವ್ ವರದಿ ನೀಡಿದ್ದಾರೆ. 

ರವಿ ಪೂಜಾರಿ ವಿಚಾರಣೆ ವೇಳೆ ಎಸಿಪಿ ವೆಂಕಟೇಶ್ ಪ್ರಸನ್ನ ಜತೆ ಸಂಪರ್ಕ ಇದ್ದ ವಿಚಾರ ಹೇಳಿದ್ದಾನೆ. ಈ ಆಪಾದನೆ ಹಿನ್ನೆಲೆಯಲ್ಲಿ ಎಸಿಪಿಯನ್ನು ವಿವಿಐಪಿ ವಿಭಾಗಕ್ಕೆ ಬುಧವಾರ ವರ್ಗಾವಣೆ ಮಾಡಲಾಗಿದೆ. ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ 1994ರಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದ ವೆಂಕಟೇಶ್ ಪ್ರಸನ್ನ 2003ರಲ್ಲಿ ಮಂಗಳೂರಲ್ಲಿ ಇನ್ಸ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ರವಿ ಪೂಜಾರಿ ಮತ್ತು ಆತನ ಸಹಚರ ಕಲಿ ಯೋಗೇಶ್ ಸೇರಿ ಕರಾವಳಿ ಭಾಗದಲ್ಲಿ ಕೆಲವು ಭೂಗತ ಪಾತಕಿಗಳ ಹಾವಳಿ ಹೆಚ್ಚಾಗಿತ್ತು. 

ಆಗ ಅಧಿಕಾರಿ ಸಹ ಭೂಗತ ಜಗತ್ತಿನ ಜತೆ ನಂಟು ಸಾಧಿಸಿದ್ದರು. 2015ರವರೆಗೆ ಮಂಗಳೂರಿನಲ್ಲಿ ಸೇವೆ ಸಲ್ಲಿಸಿ ಆ ನಂತರ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಭೂಗತ ಪಾತಕಿ ಬನ್ನಂಜೆ ರಾಜಾ ಬಂಧನ ಕಾರ್ಯಾಚರಣೆ ಹಾಗೂ ಉಗ್ರರ ಬಂಧನ ಕೇಸ್‌ಗಳಲ್ಲೂ ಎಸಿಪಿ ಪ್ರಮುಖ ಪಾತ್ರವಹಿಸಿದ್ದರು. ಭೂಗತ ಪಾತಕಿ ಜತೆ ಸಂಪರ್ಕ ಹೊಂದಿದ್ದ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಎಸಿಪಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ವಿಚಾರಣೆ ನಡೆಸಬೇಕಿದೆ. ಆದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com