ಪೊಲೀಸರಿಂದಲೇ ಲಾಕ್ ಡೌನ್ ನಿಯಮ ಉಲ್ಲಂಘನೆ: ಬಡ್ತಿ ಸಿಕ್ಕಿದ್ದಕ್ಕೆ ಅದ್ಧೂರಿ ಸನ್ಮಾನ ಕಾರ್ಯಕ್ರಮ; ಸಾರ್ವಜನಿಕರ ಟೀಕೆ

ಇಬ್ಬರು ಪೊಲೀಸರಿಗೆ ಬಡ್ತಿ ಸಿಕ್ಕಿದ್ದಕ್ಕೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆದಿದೆ. 
ಪಿಎಸ್ ಐ ನಿರ್ಮಲಾ ಮತ್ತು ಅವರ ಪತಿಯ ಚಿತ್ರ
ಪಿಎಸ್ ಐ ನಿರ್ಮಲಾ ಮತ್ತು ಅವರ ಪತಿಯ ಚಿತ್ರ

ತುಮಕೂರು: ಇಬ್ಬರು ಪೊಲೀಸರಿಗೆ ಬಡ್ತಿ ಸಿಕ್ಕಿದ್ದಕ್ಕೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆದಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ಹಾಲಿ ಪಿಎಸ್ ಐ ನಿರ್ಮಲಾ ವಿ,  ಸಿಪಿಐ ಆಗಿ ಬಡ್ತಿ ಪಡೆದಿದ್ದು, ಶಿರಾ ಟೌನ್ ಸರ್ಕಲ್ ಉಸ್ತುವಾರಿಯಾಗಿ ನಿಯೋಜನೆಯಾಗಿದ್ದರೆ, ನೊಣವಿನಕೆರೆಯ ಎಎಸ್ ಐ ಧ್ರುವ ಚಾರಿ ಪಟ್ಟನಾಯಕನಹಳ್ಳಿ ಪಿಎಸ್ ಐ ಆಗಿ ನಿಯೋಜನೆ ಮಾಡಲಾಗಿದೆ.

ಬುಧವಾರ ಸಂಜೆ ನಡೆದ ಅದ್ದೂರಿ ಸನ್ಮಾನ ಕಾರ್ಯಕ್ರಮದಲ್ಲಿ ನಿರ್ಮಲಾ ಮತ್ತು ಶಾಲಾ ಶಿಕ್ಷಕರಾಗಿರುವ ಅವರ ಪತಿಯನ್ನು ದೊಡ್ಡ ವ್ಯಕ್ತಿಗಳಂತೆ ಸನ್ಮಾನಿಸಲಾಯಿತು. ಇದಕ್ಕಾಗಿ ಬೃಹತ್ ಪೆಂಡಲ್ ಹಾಕಲಾಗಿತ್ತು, ಮಾಂಸಾಹಾರ ಊಟ ಹಾಗೂ ಮದ್ಯವನ್ನು ಸಹ ವ್ಯವಸ್ಥೆ ಮಾಡಲಾಗಿತ್ತು. 

ಚೇಳೂರು, ಹುಲಿಯೂರು, ತಾವರೆಕೆರೆ ಮತ್ತಿತರ ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ವಿಐಪಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಡಿವೈಎಸ್ಪಿ ಕುಮಾರಪ್ಪ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು ಎಂಬುದಾಗಿ ಅನೇಕ ಮಂದಿ ಹೇಳಿದ್ದಾರೆ. 

ಲಾಕ್ ಡೌನ್ ನಿಯಮಗಳನ್ನು ಮೀರಿ ಹೆಚ್ಚು ಜನ ಸೇರಿದಂತೆ ಪೊಲೀಸರು ಹೊಡೆಯುತ್ತಾರೆ.  ತಿಂಗಳ ಹಿಂದೆ ಸೀಗಲಹಳ್ಳಿ ಗ್ರಾಮದ ವಿನಾಯಕ ದೇವಾಲಯದಲ್ಲಿ ಪೂಜೆ ಮಾಡಲು ಮುಂದಾದ ಜನರ ಮೇಲೆ  ನಿರ್ಮಲಾ ಕೂಡಾ ಲಾಠಿ ಬೀಸಿದ್ದರು. ಇದೀಗ ಅದ್ದೂರಿ ಸನ್ಮಾನ ಮಾಡಿಸಿಕೊಂಡಿರುವುದು ಯಾವ ರೀತಿ ಸರಿ ಎಂದು ಸ್ಥಳೀಯರು ಟೀಕಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com