ಕಳ್ಳದಾರಿ ಮೂಲಕ ಬೆಳಗಾವಿ ಪ್ರವೇಶ: ಗರ್ಭಿಣಿ ಮಹಿಳೆ, ಕುಟುಂಬದ ವಿರುದ್ಧ ಪ್ರಕರಣ ದಾಖಲು

ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಕಾರ್ಮಿಕರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಇ ಪಾಸ್ ಪಡೆಯುವ ಮೂಲಕ ಅಧಿಕೃತವಾಗಿ ಜಿಲ್ಲೆಯ ಗಡಿ ಪ್ರವೇಶಿಸುತ್ತಿರುವವರ ನಡುವೆಯೇ ಅನಧಿಕೃತವಾಗಿ ರಾಜ್ಯಕ್ಕೆ ಪ್ರವೇಶಿಸುತ್ತಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸುವ ಕಾರ್ಮಿಕರಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತಷ್ಟು ಆತಂಕ ಎದುರಾಗಿದೆ. ಇ ಪಾಸ್ ಪಡೆಯುವ ಮೂಲಕ ಅಧಿಕೃತವಾಗಿ ಜಿಲ್ಲೆಯ ಗಡಿ ಪ್ರವೇಶಿಸುತ್ತಿರುವವರ ನಡುವೆಯೇ ಅನಧಿಕೃತವಾಗಿ ರಾಜ್ಯಕ್ಕೆ ಪ್ರವೇಶಿಸುತ್ತಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಈ ನಡುವಲ್ಲೇ ಅನಧಿಕೃತವಾಗಿ ಗಡಿಪ್ರವೇಶಿಸಿದ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ. 

ಎರಡು ದಿನಗಳ ಹಿಂದಷ್ಟೇ ಈ ಗರ್ಭಿಣಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ. ಮಹಿಳೆ ಸದಾಶಿವನಗರದ ನಿವಾಸಿಯಾಗಿದ್ದು, ಮೇ.3ರಂದು ಪತಿ, ಸಹೋದರನೊಂದಿಗೆ ಕಾರಿನಲ್ಲಿ ಬೆಳಗಾವಿಗೆ ಬಂದಿದ್ದರು. ಇವರ ಕಾರು ಚಾಲಕ ಮುಂಬೈನ ಧರವಿ ನಿವಾಸಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಇದೀಗ ನಿಯಮ ಉಲ್ಲಂಘಿಸಿ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಇದೀಗ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸ್ಥಳೀಯ ರಾಜಕೀಯ ನಾಯಕನ ಸಹಾಯ ಪಡೆಯುವ ಮೂಲಕ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಬೆಳಗಾವಿ ಪ್ರವೇಶಿಸಿದ್ದರು. ಮೇ.11ರವರೆಗೂ ಮಹಿಳೆಯ ಎಲ್ಲಾ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

1 ವಾರಗಳ ಕಾಲ ಬೆಳಗಾವಿಯಲ್ಲಿ ಉಳಿದಿದ್ದ ಮಹಿಳೆ ಬೆಳಗಾವಿಯ ಮಾರುಕಟ್ಟೆ, ಅಂಗಡಿಗಳು ಹಾಗೂ ಸದಾಶಿವ ನಗರದಲ್ಲಿರುವ ಮನೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಕ್ಕೂ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ. ಇದೀಗ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ ಪ್ರತೀಯೊಬ್ಬ ವ್ಯಕ್ತಿಯನ್ನು ಪರಿಶೀಲನೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಪ್ರತೀನಿತ್ಯ ಮಹಿಳೆ ವಾಕಿಂಗ್'ಗೆ ತೆರಳುತ್ತಿದ್ದು, ದೊಡ್ಡ ಮಟ್ಟದ ಸಂಖ್ಯೆಯಲ್ಲಿಯೇ ಜನರಿಗೆ ಸೋಂಕು ತಗುಲಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಮನೆಯ ಬಳಿಯೇ ಇದ್ದ ದಿನಸೀ ಅಂಗಡಿಗೂ ಮಹಿಳೆ ಪ್ರತೀನಿತ್ಯ ಭೇಟಿ ನೀಡುತ್ತಿದ್ದಳು, ಅಲ್ಲದೆ, ಮಹಿಳೆಯ ಸಂಬಂಧಿ ಪ್ರಮುಖವಾಗಿ ಆಕೆಯ ಸಹೋದರ ಹಲವು ಪೊಲೀಸರು ಹಾಗೂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದರೂ ಎಂದೂ ಕೂಡ ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com