ಬೆಂಗಳೂರಿನಲ್ಲಿ ಅಮೆರಿಕಾ ವೀಸಾ ಕೇಂದ್ರ ಸ್ಥಾಪಿಸಿ: ಡಿಸಿಎಂ  ಡಾ. ಅಶ್ವತ್ಥನಾರಾಯಣ ಒತ್ತಾಯ

ಬೆಂಗಳೂರಿನಲ್ಲಿ ಅಮೆರಿಕದ ವೀಸಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಪರಿಗಣಿಸುವ ಜತೆಗೆ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಅಮೆರಿಕದ ಕಾನ್ಸುಲೇಟ್ ಜನರಲ್‌ ಬಳಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಅಮೆರಿಕದ ಕಾನ್ಸುಲೇಟ್‌ ಜನರಲ್‌ ರೊಬರ್ಟ್ ಬುರ್ಗೆಸ್ ಜತೆ  ವೀಡಿಯೋ ಕಾನ್ಸರೆನ್ಸ್‌ ನಡೆಸಿದ ಡಾ. ಅಶ್ವತ್ಥನಾರಾಯಣ
ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಅಮೆರಿಕದ ಕಾನ್ಸುಲೇಟ್‌ ಜನರಲ್‌ ರೊಬರ್ಟ್ ಬುರ್ಗೆಸ್ ಜತೆ ವೀಡಿಯೋ ಕಾನ್ಸರೆನ್ಸ್‌ ನಡೆಸಿದ ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಬೆಂಗಳೂರಿನಲ್ಲಿ ಅಮೆರಿಕದ ವೀಸಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಪರಿಗಣಿಸುವ ಜತೆಗೆ ಕರ್ನಾಟಕದಲ್ಲಿ ಬಂಡವಾಳ ಹೂಡುವಂತೆ ಅಮೆರಿಕದ ಕಾನ್ಸುಲೇಟ್ ಜನರಲ್‌ ಬಳಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಸಂಬಂಧ ಅಮೆರಿಕದ ಕಾನ್ಸುಲೇಟ್‌ ಜನರಲ್‌ ರೊಬರ್ಟ್ ಬುರ್ಗೆಸ್ ಜತೆ ಮಂಗಳವಾರ ವೀಡಿಯೋ ಕಾನ್ಸರೆನ್ಸ್‌ ನಡೆಸಿದ ಬಳಿಕ ಡಾ. ಅಶ್ವತ್ಥನಾರಾಯಣ ಅವರು ಸುದ್ದಿಗಾರರ ಜತೆ ಮಾತನಾಡಿದರು. ದಕ್ಷಿಣ ಭಾರತ ದಿಂದ ಅಮೆರಿಕಕ್ಕೆ ತೆರಳುವವರ ಪೈಕಿ ಶೇ70ರಷ್ಟು ಮಂದಿ ಕರ್ನಾಟಕದವರು ಹಾಗಾಗಿ ಬೆಂಗಳೂರಿನಲ್ಲೇ ವೀಸಾ ಕೇಂದ್ರ ಸ್ಥಾಪಿಸಬೇಕು ಎಂಬ ಬಹು ದಿನಗಳ ಬೇಡಿಕೆಯನ್ನು ಅವರ ಬಳಿ ಪ್ರಸ್ತಾಪಿಸಿದ್ದೇನೆ. ಜತೆಗೆ, ಕೊವಿಡ್‌ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂಸ್ಥೆಗಳು ಕರ್ನಾಟಕಕ್ಕೆ ಸ್ಥಳಾಂತರಗೊಂಡರೆ, ಅದಕ್ಕೆ ಪೂರಕ ನೆರವು ಒದಗಿಸಲಾಗುತ್ತದೆ ಎಂದು ಅಮೆರಿಕದ ಕಾನ್ಸುಲೇಟ್‌ ಜನರಲ್‌ ನಿಯೋಗಕ್ಕೆ ಭರವಸೆ ನೀಡಲಾಯಿತು ಎಂದು ಅವರು ಹೇಳಿದರು. 

ಕೋವಿಡ್  ಹಿನ್ನೆಲೆಯಲ್ಲಿ ವಿವಿಧ ದೇಶಗಳ ಜತೆ ಸಂಬಂಧ ಸುಧಾರಣೆಗಾಗಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಬೇರೆ ಬೇರೆ ದೇಶಗಳ ಜತೆ ಮಾತುಕತೆ ಆಯೋಜಿಸಲಾಗುತ್ತಿದೆ. ಅಮೆರಿಕದ ಜತೆ ಮೊದಲಿನಿಂದಲೂ ನಮಗೆ ಉತ್ತಮ ಸಂಬಂಧ ಇದ್ದು, ಅದನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಾತುಕತೆ ನಡೆದಿದೆ. ಅಮೆರಿಕದ 500 ಟಾಪ್‌ ಫಾರ್ಚೂನ್‌ ಕಂಪನಿಗಳ ಪೈಕಿ 400 ನಮ್ಮಲ್ಲಿವೆ. ಶೇ.35ರಷ್ಟು ಐಐಸಿಗಳು ಇಲ್ಲಿವೆ. ಇನ್ನೂ ಹೆಚ್ಚಿನ ಕಂಪನಿಗಳು ಇಲ್ಲಿಗೆ ಸ್ಥಳಾಂತರಗೊಂಡರೆ ಅವರಿಗೆ ಎಲ್ಲ ಅಗತ್ಯ ನೆರವು ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಹ ಈ ನಿಟ್ಟಿನಲ್ಲಿ ಕ್ರಮ ವಹಿಸಿದ್ದಾರೆ ಎಂದು ಅವರು ಹೇಳಿದರು.

ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾನೂನಿನ ಸುಧಾರಣೆ ಸೇರಿದಂತೆ ಉದ್ದಿಮೆ ಸ್ಥಾಪನೆಗೆ ಪೂರಕವಾಗಿ ಹಲವಾರು ಸುಧಾರಣೆಗಳನ್ನು ತಂದಿರುವ ಜತೆಗೆ ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌ ನಿಯಮ ಪಾಲಿಸುವ ಮೂಲಕ ಕಂಪನಿಗಳಿಂದ ಬಂಡವಾಳ ಆಕರ್ಷಣೆಗೆ ರಾಜ್ಯ ಸರಕಾರ ಶಕ್ತಿ ಮೀರಿ ಪ್ರಯತ್ನಿಸಲಿದೆ. ನಮ್ಮ ರಾಜ್ಯ ಇಂಥ ಯಾವ ಅವಕಾಶದಿಂದಲೂ ವಂಚಿತವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.

ಸ್ಟಾರ್ಟ್‌ಅಪ್‌ ಕಂಪನಿಗಳ ಸ್ಥಾಪನೆಯಲ್ಲಿ ಬೆಂಗಳೂರು ನಂಬರ್‌ 1 ಸ್ಥಾನದಲ್ಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಮೆರಿಕದ ಕಾನ್ಸುಲೇಟ್‌ ಜನರಲ್‌ ಸಹ ಈ ಮಾತಿಗೆ ಸಹಮತ ವ್ಯಕ್ತಪಡಿಸಿ, ವಿಶ್ವದಲ್ಲೇ ಅತಿ ಹೆಚ್ಚು ಆಕರ್ಷಣೆ ಹೊಂದಿರುವ ರಾಜ್ಯ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಬೆಂಗಳೂರು ಉದ್ಯಮಿಗಳ ನೆಚ್ಚಿನ ನಗರ ಎಂದು ತಿಳಿಸಿದರು. ಕರ್ನಾಟಕದ ಜತೆ ವ್ಯವಹಾರ ನಡೆಸಲು ದೊರೆಯುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ ಎಂದು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೋವಿಡ್  ಸೋಂಕನ್ನು ಕರ್ನಾಟಕ ಅತ್ಯುತ್ತಮವಾಗಿ ನಿರ್ವಹಿಸಿದೆ. ಸಂಕಷ್ಟದ ಸಮಯದಲ್ಲಿ ಕಂಪನಿಗಳು ಕಾರ್ಯನಿರ್ವಹಿಸಲು ರಾಜ್ಯ ಸರಕಾರದಿಂದ ಉತ್ತಮ ಸಹಕಾರ ದೊರೆಕಿದ್ದು, ಮನೆಯಿಂದಲೇ ಕೆಲಸ ಮಾಡಲು ಸಾಧ್ಯವಾಗಿದೆ. ಜತೆಗೆ, ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಉತ್ತಮ ಬೆಂಬಲ ದೊರೆತಿದೆ ಎಂದು ಅಮೆರಿಕದ ಕಾನ್ಸುಲೇಟ್‌ ಜನರಲ್‌ ನೇತೃತ್ವದ ನಿಯೋಗ ಕೃತಜ್ಞತೆ ಸಲ್ಲಿಸಿತು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com