ಹೊಸದಾಗಿ ಬರುವ ಕೈದಿಗಳಿಗೆ 14 ದಿನ ಕ್ವಾರಂಟೈನ್ ಕಡ್ಡಾಯ: ರಾಜ್ಯ ಕಾರಾಗೃಹ ಇಲಾಖೆ

ಜೈಲಿಗೆ ಬರುವ ಹೊಸ ಕೈದಿಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವೆಂದು ರಾಜ್ಯ ಕಾರಾಗೃಹ ಇಲಾಖೆ ತಿಳಿಸಿದೆ. 
ಕಾರಾಗೃಹ
ಕಾರಾಗೃಹ

ಬೆಂಗಳೂರು: ಜೈಲಿಗೆ ಬರುವ ಹೊಸ ಕೈದಿಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವೆಂದು ರಾಜ್ಯ ಕಾರಾಗೃಹ ಇಲಾಖೆ ತಿಳಿಸಿದೆ. 

ಜೈಲಿಗೆ ಬರುತ್ತಿದ್ದಂತೆಯೇ ಕೈದಿಯನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿಸಲಾಗುತ್ತಿದ್ದು, ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕವಷ್ಟೇ ಜೈಲಿನೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ. 

ಪ್ರಸ್ತುತ ರಾಜ್ಯದಲ್ಲಿ ಕೇಂದ್ರೀಯ ಕಾರಾಗೃಹ ಸೇರಿದಂತೆ ಒಟ್ಟು 61 ಕಾರಾಗೃಹಗಳಿದ್ದು, ಇದಲ್ಲಿ 21 ಜಿಲ್ಲೆ ಹಾಗೂ 30 ತಾಲೂಕು ಕಾರಾಗೃಹಗಳಾಗಿವೆ. ಈ ಕಾರಾಗೃಹದಲ್ಲಿ ಒಟ್ಟು 15,150 ಮಂದಿ ಕೈದಿಗಳಿದ್ದು, ಪ್ರಸ್ತುತ ಈ ಕಾರಾಗೃಹಗಳಲ್ಲಿ ಕೇವಲ 14,000 ಕೈದಿಗಳಿನ್ನು ಇರಿಸುವಷ್ಟೇ ಮಾತ್ರ ಸ್ಥಳಾವಕಾಶವಿದೆ. ಈ ನಡುವೆ ಕೊರೋನಾ ಬಿಕ್ಕಟ್ಟು ಎದುರಾಗಿದ್ದು, ಕಾರಾಗೃಹಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಹೀಗಾಗಿ ಉತ್ತಮ ವರ್ತನೆ ಆಧಾರದ ಮೇಲೆ ಕೈದಿಗಳ ಶಿಕ್ಷೆ ಅವಧಿಯನ್ನು ಕಡಿಮೆ ಮಾಡಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ಕೈದಿಗಳ ಶಿಕ್ಷೆ ಪ್ರಮಾಣ ಕಡಿಮೆ ಮಾಡುವ ಕುರಿತು ಕಾನೂನು ಸಲಹೆಗಳನ್ನು ಪಡೆಯಲಾಗುತ್ತಿದೆ. ಈ ಕುರಿತು ಸಂಪುಟ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದರು. 

ಈ ನಡುವೆ ಜೈಲಿಗೆ ಭೇಟಿ ನೀಡುವುದನ್ನು ಇಲಾಖೆ 2 ತಿಂಗಳವರೆಗೂ ಸಂಪೂರ್ಣವಾಗಿ ಬಂದ್ ಮಾಡಿದ್ದು, ಈ ನಡುವೆ ಹೊಸ ಕೈದಿಗಳ ನಿಭಿಯಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 5,000 ಕೈದಿಗಳಿದ್ದು, ಕಳೆದ ಒಂದು ತಿಂಗಳಿನಲ್ಲಿ 122 ಮಂದಿ ಹೊಸ ಕೈದಿಗಳು ಆಗಮಿಸಿದ್ದಾರೆ. ಇದೀಗ ಹೊಸದಾಗಿ ನಿರ್ಮಾಣವಾಗಿರುವ ಮಹಿಳಾ ಕಾರಾಗೃಹದಲ್ಲಿ ಅವರನ್ನು ಇರಿಸಲಾಗಿದೆ. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಹೊಸ ಕೈದಿಗಳನ್ನು ಜೈಲಿನೊಳಗೆ ನೇರವಾಗಿ ಬಿಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇಲ್ಲಿಯೂ ವೈರಸ್ ಹರಡಿದ್ದೇ ಆದರೆ, ಪರಿಸ್ಥಿತ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com